ದೇವನಹಳ್ಳಿ: ಸಮುದಾಯ ಆರೋಗ್ಯಾಧಿಕಾರಿಗಳನ್ನುಖಾಯಂಗೊಳಿಸಬೇಕು. ಮುಂಬಡ್ತಿ ಯೋಜನೆಯಲ್ಲಿ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ, ಬೆಂಗ್ರಾಜಿಲ್ಲಾ ಅಖೀಲ ಕರ್ನಾಟಕ ರಾಜ್ಯ ಸಮುದಾಯಆರೋಗ್ಯ ನೌಕರರ ಸಂಘದಿಂದ ತಾಲೂಕಿನಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಅಖೀಲ ಕರ್ನಾಟಕ ರಾಜ್ಯ ಸಮುದಾಯ ಆರೋಗ್ಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಕರಿಯಣ್ಣ ಮಾತನಾಡಿ, ಕೊರೊನಾ ವೇಳೆ ಎಲ್ಲ ಹಂತದಲ್ಲಿ ಕೆಲಸ ಮಾಡಿದ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಕೋವಿಡ್-19 ಭತ್ಯೆ ನೀಡಿಲ್ಲ. ಹೀಗಾಗಿ, ಭತ್ಯೆ ಬಿಡುಗಡೆ ಮಾಡಬೇಕು. ರಾಷ್ಟ್ರೀಯ ಆರೋಗ್ಯಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ನೀಡಲಾಗಿರುವ 12 ರೀತಿಯ ಆರೋಗ್ಯ ಸೇವೆಯನ್ನು ಗ್ರಾಮೀಣರಿಗೆ ಕಲ್ಪಿಸಲು ವಿಫಲರಾಗುತ್ತಿದೆ. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಸಮನ್ವಯತೆ ಕೊರತೆಯಾಗುತ್ತಿದ್ದು, ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು.
ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ವಹಣೆಗೆ ಮೀಸಲಿಡುವ 50 ಸಾವಿರ ನಿಧಿಯನ್ನು ಬಳಸಿಕೊಳ್ಳಲು ಅವಕಾಶ ನೀಡಬೇಕು. ಔಷಧಿಗಳು, ಸಲಕರಣೆಗಳು, ಉಗ್ರಾಣದಂತಹ ಮೂಲ ಸೌಲಭ್ಯ ಕಲ್ಪಿಸಲು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮಾರ್ಗಸೂಚಿ ನೀಡಿಲ್ಲ: ಈವರೆಗೂ ಸರ್ಕಾರ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ನಿಯೋಜಿತಗೊಂಡಿರುವ ಅಧಿಕಾರಿಗಳ ಕಾರ್ಯವೈಖರಿಯ ಮಾರ್ಗಸೂಚಿ ನೀಡಿಲ್ಲ. ಕೂಡಲೇ ಅದನ್ನು ಬಿಡುಗಡೆಗೊಳಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡದ ಸಮಿತಿ ರಚನೆ ಮಾಡಿ, ಸಿಬ್ಬಂದಿ ಕುಂದು ಕೊರತೆ ನಿವಾರಣೆಗಾಗಿ ಅನುವು ಮಾಡಬೇಕು ಎಂದರು.
ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಷಾ, ಖಜಾಂಜಿ ಕೃಷ್ಣ, ಮನುಜಾ, ವೇದಾವತಿ, ವಿಜಯ್, ಪುಟ್ಟರಾಜು ಸೇರಿದಂತೆ ಜಿಲ್ಲೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಸಿಬ್ಬಂದಿ ಇದ್ದರು.