ಕೊಪ್ಪಳ: ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದಲ್ಲಿನ ಶ್ರೀ ವ್ಯಾಸರಾಯರ ವೃಂದಾವನ ಧ್ವಂಸ ಪ್ರಕರಣ ಖಂಡಿಸಿ ಜಿಲ್ಲಾ ಬ್ರಾಹ್ಮಣ ಸಮಾಜದಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಆನೆಗೊಂದಿನ ನವ ವೃಂದಾವನ ಗಡ್ಡೆಯಲ್ಲಿ ನವರತ್ನದಂತೆ ಕಂಗೊಳಿಸುತ್ತಿದ್ದ ಶ್ರೀ ವ್ಯಾಸರಾಯರ ವೃಂದಾವನ ಧ್ವಂಸ ಮಾಡಿದ್ದು, ಅತ್ಯಂತ ಹೇಯ ಕೃತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಹಾಗೂ ಬ್ರಾಹ್ಮಣ ಸಂಘಟಿತ, ಸ್ಥಳಗಳಿಗೆ ಎಲ್ಲಿಯೂ ರಕ್ಷಣೆ ಇಲ್ಲದಂತಾಗುತ್ತಿವೆ. ಈ ದುರ್ಘಟನೆ ನಡೆದಿದ್ದು ನಿಜಕ್ಕೂ ಖಂಡನೀಯ ಎಂದರು ಅಸಮಾಧಾನ ವ್ಯಕ್ತಪಡಿಸಿದರು.
ನಿಧಿಗಳ್ಳರು ಈ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಸೋಸಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೊಂದು ರಾಷ್ಟ್ರೀಯ ದುರಂತ. ವ್ಯಾಸರಾಯರು ಕೇವಲ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಎಲ್ಲ ಸಮಾಜದ ಗುರುಗಳಾಗಿದ್ದಾರೆ. ಹಿಂದೂ ಸಮಾಜಕ್ಕೆ ಗುರುವಾಗಿದ್ದಾರೆ.
ದಕ್ಷಿಣ ಭಾರತದಲ್ಲಿ ಶ್ರೀಕೃಷ್ಣದೇವರಾಯನನ್ನು ರಕ್ಷಿಸಿದವರಾಗಿದ್ದಾರೆ. ಭಾರತದ ಇತಿಹಾಸದಲ್ಲಿ ಸಾಮ್ರಾಜ್ಯವನ್ನು ಕೆಲವು ಕಾಲ ಆಡಳಿತ ನಡೆಸಿದ ಏಕೈಕ ಬ್ರಾಹ್ಮಣ ಸನ್ಯಾಸಿ ಎಂದರೆ ಅದುವೇ ವ್ಯಾಸರಾಯರು. ದಾಸಕೂಟ, ವ್ಯಾಸಕೂಟ ರಚಿಸಿ ಸಂಸ್ಕೃತಿ ಸಂಪ್ರದಾಯ ಉಳಿಸಿ ಬೆಳೆಸಿದ್ದಾರೆ.
ಕನಕದಾಸರು, ಪುರಂದರ ದಾಸರು ಉನ್ನತ ಸ್ಥಾನಕ್ಕೆ ಬರಲು ಇವರೇ ಕಾರಣೀಕರ್ತರಾಗಿದ್ದಾರೆ. ಇಂತಹ ಮಹಾತ್ಮರ ಮೂಲ ವೃಂದಾವನವನ್ನು ಅನಾಮಧೇಯ ವ್ಯಕ್ತಿಗಳು ಧ್ವಂಸ ಮಾಡಿ ಹೇಯ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ಪೊಲೀಸರು ಸಂಪೂರ್ಣ ತನಿಖೆ ನಡೆಸಿ ತಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಡಾ. ಕೆ.ಜಿ. ಕುಲಕರ್ಣಿ, ಅಪ್ಪಣ್ಣ ಪದಕಿ, ಅನಂತಾಚಾರ್ಯ, ವೇಣುಗೋಪಾಲ, ಜಗನ್ನಾಥ ಹುನಗುಂದ ಸೇರಿದಂತೆ ಇತರರು ಪಾಲ್ಗೊಂಡಿದ್ದರು.