ಬೆಳಗಾವಿ: ರಾಜ್ಯ ಸರ್ಕಾರದ ರೈತ ವಿರೋಧಿ, ಬರ ನಿರ್ವಹಣೆಯಲ್ಲಿ ವಿಫಲವಾಗಿ ಬರದ ಮೇಲೆ ಬರೆ ಎಳೆಯುತ್ತಿರುವುದನ್ನು ಖಂಡಿಸಿ ಸರ್ಕಾರಕ್ಕೆ ಬಾರುಕೊಲಿನ ಚಡಿ ಏಟು ನೀಡಲು ಡಿ. 13ರಂದು ಮಧ್ಯಾಹ್ನ 3 ಗಂಟೆಗೆ ನಗರದ ಬಿ.ಎಸ್. ಯಡಿಯೂರಪ್ಪ ಮಾರ್ಗದಲ್ಲಿರುವ ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ. 13ರಂದು ನಡೆಯಲಿರುವ ಬಿಜೆಪಿಯ ಬೃಹತ್ ಪ್ರತಿಭಟನೆಯಲ್ಲಿ ಸುಮಾರು 25 ಸಾವಿರ ರೂ. ಜನರು ಭಾಗವಹಿಸಲಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಮುಖಂಡರಾದ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ವಿಪಕ್ಷ ನಾಯಕ ಆರ್. ಅಶೋಕ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿ ಎಲ್ಲ ನಾಯಕರು ಭಾಗವಹಿಸಲಿದ್ದಾರೆ. ಬಾರುಕೋಲಿನ ಚಡಿ ಏಟು ನೀಡುವ ಆಂದೋಲನ ನಡೆಸಲಾಗವುದು ಎಂದು ತಿಳಿಸಿದರು.
ಬರ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರ ವಿಫಲವಾಗಿದೆ. 125 ವರ್ಷಗಳಲ್ಲಿಯೇ ಇಂಥ ದೊಡ್ಡ ಮಳೆ ಕೊರತೆ ಆಗಿದ್ದರೂ ರಾಜ್ಯ ಸರ್ಕಾರ 125 ರೂ. ಅನ್ನೂ ಬಿಡುಗಡೆ ಮಾಡಿಲ್ಲ. ಇನ್ನೂವರೆಗೆ ಯಾವುದೇ ಶಾಸಕರಿಗೆ ಅನುದಾನ ನೀಡುತ್ತಿಲ್ಲ. ಆತ್ಮಹತ್ಯೆ ಮಾಡಿಡರೈತರಿಗೂ ಪರಿಹಾರ ನೀಡುತ್ತಿಲ್ಲ. ಎಂದು ದೂರಿದರು.
ಅಲ್ಪಸಂಖ್ಯಾತರ ಓಲೈಕೆಗಾಗಿ 10 ಸಾವಿರ ಕೋಟಿ ರೂ. ನೀಡುವುದಾಗಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ರೈತರಿಗೆ ಸರಿಯಾಗಿ ವಿದ್ಯುತ್ ನೀಡದೆ ಬರದ ಮೇಲೆ ಬರೆ ಎಳೆಯುತ್ತಿದೆ. ಹೊಸ ಬೋರ್ ವೆಲ್ ಹಾಕಬೇಕಾದರೆ ಟ್ರಾನ್ಸಫಾರ್ಮರ್, ವಿದ್ಯುತ್ ಖರ್ಚಿಗೆ 2ರಿಂದ 3 ಲಕ್ಷ ರೂ. ರೈತರೇ ಭರಿಸಬೇಕಿದೆ. ಇದು ರೈತ ವಿರೋಧಿ ನೀತಿಯಾಗಿದ್ದು, ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಒಬ್ಬ ಶಾಕಸರಿಗೂ ಅನುದಾನ ಸಿಗುತ್ತಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಅನುದಾನ ನೀಡಿಲ್ಲ. ರೈತರು, ಉತ್ತರ ಕರ್ನಾಟಕದಲ್ಲಿ ಒಂದೂ ರಸ್ತೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಎಸ್ ಸಿ, ಎಸ್ಟಿ ಸಮುದಾಯದ ಅನುದಾನವನ್ನು ಬೇರೆ ಇಲಾಖೆಗೆ ನೀಡಿದೆ. ವಿವಿಧ ನಿಗಮಗಳಿಗೆ ಒಂದು ಪೈಸೆಯೂ ನೀಡಿಲ್ಲ. ಅಲ್ಪಸಂಖ್ಯಾತರಿಗೆ ಮಾತ್ರ ಪ್ರಥಮಾದ್ಯತೆ ನೀಡುತ್ತಿದೆ. 11,500 ಕೋಟಿ ರೂ. ಅನುದಾನವನ್ನು ವಾಪಸ್ ಪಡೆದು ಎಸ್ ಸಿ, ಎಸ್ ಟಿಗೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ನಗರ ಅಧ್ಯಕ್ಷ ಅನಿಲ್ ಬೆನಕೆ, ಮುಖಂಡರಾದ ಎಂ.ಬಿ. ಜಿರಲಿ, ಡಾ. ರವಿ ಪಾಟೀಲ ಇದ್ದರು.