ರಾಮನಗರ: ಸರ್ಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್ ಪ್ರಸರಣ ನಿಗಮಗಳನ್ನು (ಎಸ್ಕಾಂ) ಖಾಸಗಿಕರಣಗೊಳಿಸಲು ಮುಂದಾಗಿರುವ ಸರ್ಕಾರದ ನೀತಿ ಖಂಡಿಸಿ ನಗರದಲ್ಲಿ ಬೆಸ್ಕಾಂ ನೌಕರರು ಕಪ್ಪು ಪಟ್ಟಿಧರಿಸಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ನಂತರ ಕರ್ತವ್ಯಕ್ಕೆ ತೆರಳಿದರು.
ನಗರದ ಬೆಸ್ಕಾಂ ಕಚೇರಿ ಆವರಣದಲ್ಲಿ ಜಮಾಯಿಸಿದ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಹಾಗೂ ಲೈನ್‌ಮೆನ್ ಗಳು ಎಸ್ಕಾಂಗಳನ್ನು ಖಾಸಗಿ ಸ್ವಾಮ್ಯಕ್ಕೆ ಒಪ್ಪಿಸಲು ಉದ್ದೇಶಿಸಿರುವುದು ಸರಿಯಲ್ಲ. ಎಸ್ಕಾಂಗಳು ಖಾಸಗಿಯವರ ಪಾಲಾದರೆ ಅನೇಕರ ನೌಕರಿಗೆ ಕತ್ತರಿ ಬೀಳುತ್ತದೆ. ಅನೇಕರು ಬೀದಿಗೆ ಬೀಳುತ್ತಾರೆ. ಅಲ್ಲದೆ ಸರ್ಕಾರದ ಭಾಗ್ಯಜ್ಯೋತಿ, ಕುಟಿರ ಜ್ಯೋತಿ, ರೈತರ ಪಂಪ್‌ಸೆಟ್ ಗಳಿಗೆ ಉಚಿತ ವಿದ್ಯುತ್‌ಗೆ ಸಂಚಕಾರ ಬರಲಿದೆ ಎಂದು ದೂರಿದರು.
50 ಸಾವಿರ ನೌಕರರ ಭವಿಷ್ಯದ ಪ್ರಶ್ನೆ!: ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬೆಸ್ಕಾಂ ಎಒ ಸತೀಶ್, ಎಸ್ಕಾಂಗಳನ್ನು ಖಾಸಗಿಕರಣ ಮಾಡುತ್ತಿರುವುದು ದುರಾದೃಷ್ಟಕರ. ರಾಜ್ಯದ ಎಸ್ಕಾಂಗಳಲ್ಲಿ 50 ಸಾವಿರ ಮಂದಿ ಕಾರ್ಯನಿ ರ್ವಹಿಸುತ್ತಿದ್ದಾರೆ. 5 ಸಾವಿರ ಮಂದಿ ಪಿಂಚಣಿ ಪಡೆಯುತ್ತಿದ್ದಾರೆ. ಖಾಸಗಿಯಾದರೆ ಇವರೆಲ್ಲರ ಭವಿಷ್ಯ ಏನು ಎಂಬ ಪ್ರಶ್ನೆ ಎದ್ದಿದೆ ಎಂದರು.
ಖಾಸಗಿಯಾದರೆ ಭವಿಷ್ಯ ಘೋರ!: ಸಹಾಯಕ ಇಂಜಿನಿಯರ್ ಪ್ರಭಾಕರ್ ಮಾತನಾಡಿ, ವಿದ್ಯುತ್ ಸರಬರಾಜು ಸಂಸ್ಥೆಗಳು ಖಾಸಗಿಕರಣವಾದರೆ ಕೇವಲ ನೌಕರರಿಗೆ ಮಾತ್ರವಲ್ಲ ರೈತರಿಗೂ ತೊಂದರೆಯಾಗಲಿದೆ. ಪ್ರತಿಯೊಂದು ಕುಟುಂಬದ ಮೇಲೂ ಪರಿಣಾಮಬೀರಲಿದೆ. ಸದ್ಯಬಡ ಕುಟುಂಬಗಳಿಗೆ ವಿವಿಧ ಯೋಜನೆಗಳ ಮೂಲಕ ಮಾಸಿಕ 40 ಯೂನಿಟ್‌ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ರೇಷ್ಮೆ ಉದ್ಯಮದಲ್ಲಿ ತೊಡಗಿಸಿ ಕೊಂಡಿರುವ ಹುರಿ ಮಿಷಿನ್ ಮುಂತಾದ ಕಾರ್ಖಾನೆಗಳಿಗೆ ನೀಡು ತ್ತಿರುವ ಸಬ್ಸಿಡಿಗಳು ನಿಲ್ಲುತ್ತವೆ.
ಹೀಗಾಗಿ ನಾಗರಿಕರು ತಮ್ಮ ಹೋರಾಟಕ್ಕೆ ಸಹಕಾರ ನೀಡಬೇಕು ಎಂದರು. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದಕೇಂದ್ರ ಸಮಿತಿ ಕಾರ್ಯಕಾರಣಿಸಮಿತಿ ಸದಸ್ಯಹಾಗೂ ಸ್ಥಳೀಯ ಘಟಕದ ಅಧ್ಯಕ್ಷ ಸೋಮಶೇ ಖರ್ ಮಾತನಾಡಿ, ಸರ್ಕಾರದ ಖಾಸಗಿಕರಣ ನೀತಿಯನ್ನು ವಿರೋಧಿಸಿದರು.
ಪ್ರತಿಭಟನೆಯಲ್ಲಿ ಕೇಂದ್ರ ಸಮಿತಿಯ ಕಾರ್ಯಕಾರಣಿ ಸಮಿತಿ ಸದಸ್ಯ ಗೋಪಾಲಸ್ವಾಮಿ, ಪ್ರಮುಖರಾದ ಚಂದನಾ, ಮಹದೇವಮ್ಯ, ಶೀಲಾ,ನಾಗರಾಜ್ (ಗಾಂಧಿ), ಶಿವಲಿಂಗಯ್ಯ. ಕೆ.ಎನ್, ಸಿ.ವಿ.ಬಾಬು, ಪ್ರಕಾಶ್.ಸಿ.ಕೆ. ಮುಂತಾದವರು ಹಾಜರಿದ್ದರು.