ತಿಪಟೂರು: ಸರ್ಕಾರ ರೈತರು ಬೆಳೆದ ಎಲ್ಲಾ ರಾಗಿಯನ್ನು ಕೊಂಡುಕೊಳ್ಳುವಂತೆ ಹಾಗೂ ರಾಗಿಗೆ ಕನಿಷ್ಠ ಬೆಂಬಲ ಬೆಲೆಯಡಿ ಕ್ವಿಂಟಲ್‌ಗೆ ರೂ. 4 ಸಾವಿರ ನಿಗದಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತ ರೈತ-ಕೃಷಿ ಕಾರ್ಮಿಕ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಸಂಘಟನೆ ತಾ.ಅಧ್ಯಕ್ಷ ಎಸ್.ಎನ್. ಸ್ವಾಮಿ ಮಾತನಾಡಿ, ರೈತ ಸಂಕುಲವೇ ಸಂಕಷ್ಟಕ್ಕೆ ಸಿಲುಕಿರುವ ಇಂತಹ ಸಂದರ್ಭದಲ್ಲಿ ಸರ್ಕಾರ ಸಣ್ಣ ರೈತ, ದೊಡ್ಡ ರೈತ ಎಂಬ ತಾರತಮ್ಯ ಮಾಡುತ್ತಾ ರೈತರನ್ನು ಕಡೆಗಣಿಸುತ್ತಿದೆ ಎಂದರು.
ವಿಳಂಬ ಧೋರಣೆ: ಕೇವಲ ಕಾರ್ಪೋರೆಟ್ ಕಂಪನಿಗಳನ್ನು ಉದ್ಧಾರ ಮಾಡುತ್ತಿರುವ ಸರ್ಕಾರ ಗಳು ಬಡ ರೈತರನ್ನು ಮರೆತಿವೆ. ರಾಗಿ ಖರೀದಿ ಯಲ್ಲಿ ರೈತರಿಗೆ ಅನ್ಯಾಯವಾಗುತ್ತಿದ್ದು, ರಾಗಿ ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತಾಗಿದೆ. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡುವುದಾಗಿ ಹೇಳುವ ಸರ್ಕಾರಗಳು ಪ್ರತಿ ವರ್ಷವೂ ಖರೀದಿಯಲ್ಲಿ ವಿಳಂಬ ಧೋರಣೆ ಪಾಲಿಸುತ್ತಾ ಬಂದಿದೆ.
ಖರೀದಿಗೆ ಮಿತಿ ಬೇಡ: ಚುನಾವಣೆಯಲ್ಲಿ ಕೋಟಿ ಗಟ್ಟಲೆ ಖರ್ಚು ಮಾಡಿ ಐಷಾರಾಮಿ ಜೀವನ ನಡೆಸುವ ಶಾಸಕರು, ಮಂತ್ರಿಗಳು ಸಂಬಳ ಮತ್ತು ಭತ್ಯೆ ಹೆಚ್ಚಿಸಿಕೊಳ್ಳಲು ಸರ್ಕಾರದಲ್ಲಿ ಬೇಕಾದಷ್ಟು ಹಣ ಇದೆ. ಆದರೆ ರೈತರು ತಾವು ಬೆಳೆದ ರಾಗಿ ಯನ್ನು ಮಾರಿ ಬದುಕು ಕಟ್ಟಿಕೊಳ್ಳಲು ಹೆಣಗಾ ಡುವ ಪರಿಸ್ಥಿತಿ ಇದೆ. ರಾಗಿಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಕೊಳ್ಳಲು ಸರ್ಕಾರದ ಬೊಕ್ಕಸದಲ್ಲಿ ಮಾತ್ರ ಹಣವಿಲ್ಲ. ಆದ್ದರಿಂದ ರಾಗಿ ಖರೀದಿಯಲ್ಲಿರುವ ಮಿತಿಯನ್ನು ತೆಗೆದು ಹಾಕಿ ರೈತರು ಬೆಳೆದ ಎಲ್ಲಾ ರಾಗಿಯನ್ನು ಸಂಪೂರ್ಣವಾಗಿ ಸರ್ಕಾರ ಖರೀದಿಸಬೇಕು ಎಂದರು.
ಕಾನೂನು ಬದ್ಧ ಮಾಡಬೇಕು: ರಾಗಿ ಕನಿಷ್ಠ ಬೆಂಬಲ ಬೆಲೆಯನ್ನು 4 ಸಾವಿರ ರೂ.ಗೆ ಏರಿಸಬೇಕು. ರಾಗಿ ಕಟಾವು ಆದ ತಕ್ಷಣವೇ ಖರೀದಿ ಕೇಂದ್ರ ತೆರೆಯಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧ ಮಾಡಬೇಕು. ಕೃಷಿ ಉತ್ಪನ್ನಗಳಲ್ಲಿ ಸಂಪೂರ್ಣ ಸರ್ಕಾರಿ ವ್ಯಾಪಾರವನ್ನು ಆರಂಭಿಸಬೇಕು. ಹೀಗೆ ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಬೃಹತ್ ಪ್ರತಿಭನೆ ಹಮ್ಮಿಕೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಚಂದ್ರಶೇಖರ್, ನಿಮ್ಮ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಿ ಸರ್ಕಾರದ ಆದೇಶದಂತೆ ಕಾರ್ಯ ನಿರ್ವಹಿಸಲಾಗುವುದು. ರಾಗಿ ಖರೀದಿ ಕೇಂದ್ರದಲ್ಲಾಗುತ್ತಿರುವ ಲೋಪದೋಷದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಿ.ಬಿ. ಸಿದ್ದಲಿಂಗಮೂರ್ತಿ, ರೈತ ಸಂಘಟನೆಯ ಲೋಕೇಶ್ ಭೈರನಾಯಕನಹಳ್ಳಿ, ಮನೋಹರ್ ಪಟೇಲ್, ಸಚಿನ್ ಬೊಮ್ಮಲಾಪುರ, ಪ್ರಸಾದ್ ಮಾದಿಹಳ್ಳಿ, ನಾಗರಾಜು, ದಕ್ಷಿಣಮೂರ್ತಿ, ಲೋಹಿತ್, ಗೌರಿಶಂಕರ್, ರಘು ಹೆಡಗಹಳ್ಳಿ, ಸತೀಶ್ ಹಾಲ್ಕುರಿಕೆ, ಶ್ರೀಹರ್ಷ ಮತ್ತಿತರರಿದ್ದರು.