Advertisement

ಅನುದಾನ ವರ್ಗಾವಣೆ ಮೂಲಕ ಆಡಳಿತ ವೈಫ‌ಲ್ಯ ಮರೆಮಾಚುವ ಯತ್ನ : ಸೊರಕೆ ಆರೋಪ

07:20 PM Oct 15, 2020 | sudhir |

ಕಾಪು : ಹಿಂದಿನ ಸರಕಾರದ ಅವಧಿಯಲ್ಲಿ ಜಾರಿಗೆ ತಂದ ಹಲವಾರು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರುವಲ್ಲಿ ಕಾಪು ಪುರಸಭೆಯ ಆಡಳಿತ ಸಂಪೂರ್ಣ ವಿಫಲವಾಗಿದೆ. ಶಾಸಕರು ಮತ್ತು ಪುರಸಭೆಯ ಅಧಿಕಾರಿಗಳು ತಮ್ಮ ಆಡಳಿತ ವೈಫಲ್ಯವನ್ನು ಮರೆಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿರುವ ಅನುದಾನವನ್ನು ಬೇರೆ ಕ್ಷೇತ್ರಗಳಿಗೆ ವರ್ಗಾಯಿಸುವ ಮೂಲಕ ಪುರಸಭೆ ವ್ಯಾಪ್ತಿಯ ಜನರನ್ನು ವಂಚಿಸುತ್ತಿದ್ದಾರೆ. ಇದರ ವಿರುದ್ಧ ಜನಾಭಿಪ್ರಾಯ ಮೂಡಿಸುವ ಉದ್ದೇಶದಿಂದ ಪ್ರತಿಭಟನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಹೇಳಿದರು.

Advertisement

ಕಾಪು ಪುರಸಭೆ ಮತ್ತು ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಮಂಜೂರುಗೊಂಡಿದ್ದ ಅಭಿವೃದ್ಧಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಟಾನಕ್ಕೆ ತರುವಂತೆ ಆಗ್ರಹಿಸಿ ಮತ್ತು ವಿವಿಧ ತೆರಿಗೆಗಳನ್ನು ಏಕಾಏಕಿಯಾಗಿ ಹೆಚ್ಚಿಸಿರುವುದನ್ನು ವಿರೋಧಿಸಿ ಕಾಪು ಪುರಸಭೆಯ ಮುಂಭಾಗದಲ್ಲಿ ಅ. 15ರಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.

75 ಕೋ. ರೂ. ಗೂ ಮಿಕ್ಕ ಅಭಿವೃದ್ಧಿ ಯೋಜನೆಗಳು ನೆನೆಗುದಿಗೆ
ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 75 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಅಭಿವೃದ್ಧಿ ಯೋಜನೆಗಳು ಶಾಸಕರು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದಿವೆ. 58 ಕೋಟಿ ರೂಪಾಯಿ ವೆಚ್ಚದ ಬೃಹತ್‌ ಕುಡಿಯುವ ನೀರಿನ ಯೋಜನೆ, 3 ಕೋಟಿ ರೂ. ವೆಚ್ಚದ ಒಳಚರಂಡಿ ನೀರು ಶುದ್ಧೀಕರಣ ಘಟಕ, 10 ಕೋ. ರೂ. ವೆಚ್ಚದ ತ್ಯಾಜ್ಯ ನಿರ್ವಹಣಾ ಘಟಕ, ನಗರೋತ್ಥಾನ ಯೋಜನೆಯಡಿ ಮೀನು ಮಾರುಕಟ್ಟೆ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣ, ತ್ಯಾಜ್ಯ ನಿರ್ವಹಣೆ, ಕಾರ್ಮಿಕರ ವಸತಿ ಸೌಲಭ್ಯ, ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ, ಡೆಲ್ಟಾ ಯೋಜನೆಗಳ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ ಮಾತನಾಡಿ, ಕಾಪು ಪುರಸಭೆಯಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತಗೊಂಡಿದೆ. ಹಿಂದಿನ ಶಾಸಕರು ತಮ್ಮ ಅಧಿಕಾರದ ಅವಧಿಯಲ್ಲಿ ಪುರಸಭೆಯನ್ನು ಆರಂಭಿಸಿ, ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಿರುವ ಅನುದಾನವನ್ನು ಬೇರೆ ಕಾಮಗಾರಿಗಳು ಮತ್ತು ಇತರ ಪ್ರದೇಶಗಳಿಗೆ ವರ್ಗಾಯಿಸುವ ಪ್ರಯತ್ನವೂ ನಡೆಯುತ್ತಿದೆ. ಇದರ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದ್ದು ಜನರು ಬೀದಿಗಳಿಯುವ ಮುನ್ನ ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.

ಕಾಪು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕಾಪು ನಗರ ಕಾಂಗ್ರೆಸ್‌ ಅಧ್ಯಕ್ಷ ಮಹಮದ್‌ ಸಾಧಿಕ್‌, ಕೆಪಿಸಿಸಿ ಮುಖಂಡ ಎಂ.ಎ. ಗಫೂರ್‌, ಕೆಪಿಸಿಸಿ ಕಾರ್ಯದರ್ಶಿ ಡಾ| ದೇವಿಪ್ರಸಾದ್‌ ಶೆಟ್ಟಿ, ಕಾಂಗ್ರೆಸ್‌ ಯುವ ಮುಖಂಡ ಅಜಿತ್‌ ಕುಮಾರ್‌ ಹಿರಿಯಡಕ ಮೊದಲಾದವರು ಮಾತನಾಡಿದರು. ಪ್ರತಿಭಟನಾ ಸಭೆಯ ಬಳಿಕ ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್‌ ನಾವಡ ಅವರ ಮೂಲಕವಾಗಿ ಉಡುಪಿ ಜಿಲ್ಲಾಧಿಕಾರಿಯವರಿಗೆ ವಿವಿಧ ಬೇಡಿಕೆಗಳ ಮನವಿ ಪಟ್ಟಿಯನ್ನು ಸಲ್ಲಿಸಲಾಯಿತು.

Advertisement

ತಾ.ಪಂ. ಸದಸ್ಯರಾದ ಯು.ಸಿ. ಶೇಖಬ್ಬ , ಮೈಕಲ್‌ ರಮೇಶ್‌ ಡಿ’ಸೋಜ, ರಾಜೇಶ್‌ ಶೆಟ್ಟಿ ಪಾಂಗಾಳ, ಮಹಿಳಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಕಾಪು ಬ್ಲಾಕ್‌ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪ್ರಭಾ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷರಾದ ಸೌಮ್ಯಾ ಎಸ್‌., ಮಾಲಿನಿ, ಮಾಜಿ ಉಪಾಧ್ಯಕ್ಷ ಕೆ.ಎಚ್‌. ಉಸ್ಮಾನ್‌, ಸದಸ್ಯರಾದ ವಿಜಯಲಕ್ಷ್ಮೀ ಕೋಟ್ಯಾನ್‌, ಅಶ್ವಿ‌ನಿ ನವೀನ್‌, ಸುಲೋಚನಾ ಬಂಗೇರ, ಶಾಬು ಸಾಹೇಬ್‌, ಶಾಂತಲತಾ ಶೆಟ್ಟಿ, ಅಬ್ದುಲ್‌ ಹಮೀದ್‌, ಸುರೇಶ್‌ ದೇವಾಡಿಗ, ಪಕ್ಷದ ಮುಖಂಡರಾದ ಸರಸು ಡಿ. ಬಂಗೇರ, ಮಾಧವ ಆರ್‌. ಪಾಲನ್‌, ಶಿವಾಜಿ ಎಸ್‌. ಸುವರ್ಣ, ವೈ. ಗಂಗಾಧರ ಸುವರ್ಣ, ಪ್ರಶಾಂತ್‌ ಜತ್ತನ್ನ, ಕೇಶವ ಹೆಜಮಾಡಿ, ಅಖೀಲೇಶ್‌ ಕೋಟ್ಯಾನ್‌, ದೀಪಕ್‌ ಕುಮಾರ್‌ ಎರ್ಮಾಳು, ವೈ. ಸುಧೀರ್‌ ಕುಮಾರ್‌, ಅಮೀರ್‌ ಕಾಪು, ಹರೀಶ್‌ ನಾಯಕ್‌, ನವೀನ್‌ ಎನ್‌. ಶೆಟ್ಟಿ, ಸುನೀಲ್‌ ಬಂಗೇರ, ಅಶೋಕ್‌ ರಾವ್‌, ಶ್ರೀಕರ ಅಂಚನ್‌, ಶಾರದಾ ಪೂಜಾರ್ತಿ, ಸುಜಾತ ಸುವರ್ಣ, ನಾಗೇಶ್‌ ಸುವರ್ಣ ಮೊದಲಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next