ಕಲಬುರಗಿ : ನೆರೆಯ ಹುಮನಾಬಾದ ತಹಶೀಲ್ದಾರ್ ಡಾ| ಪ್ರದೀಪಕುಮಾರ ಹಿರೇಮಠ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಕಠಿಣ ಕಾನೂನು ರೂಪಿಸಬೇಕು ಎಂದು ಸರ್ಕಾರಿ ನೌಕರರು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು (ಹಣಮಂತ) ಲೇಂಗಟಿ ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಕಚೇರಿಯಲ್ಲಿ ಕರ್ತವ್ಯ ನಿರತ ಹುಮನಾಬಾದ್ ತಹಶೀಲ್ದಾರ್ ಮೇಲಿನ ಹಲ್ಲೆ ಘಟನೆ ಖಂಡಿಸಿ ಹಾಗೂ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಲು ಕಠಿಣ ಕಾನೂನು ರೂಪಿಸುವಂತೆ ಆಗ್ರಹಿಸಲಾಯಿತು.
ಹುಮನಾಬಾದ್ ಬಿಎಸ್‌ಪಿ ಮುಖಂಡರು ಮನವಿ ಪತ್ರ ಸ್ವೀಕರಿಸಲು ತಹಶೀಲ್ದಾರರು ವಿಳಂಬ ಮಾಡುತ್ತಿರುವಿರೆಂದು ತಾಳ್ಮೆ ಸಹನೆ ಕಳೆದುಕೊಂಡು ಕಚೇರಿಗೆ ನುಗ್ಗಿ ನಡೆಸಿರುವ ಅಮಾನವೀಯ ಹಲ್ಲೆ ಖಂಡನೀಯವಾಗಿದೆ. ರಾಜ್ಯದಾದ್ಯಂತ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭಗಳಲ್ಲಿ ಇಂತಹ ಘಟನೆ ಆಗಾಗ್ಗೆ ಸಂಭವಿಸುತ್ತಿವೆ. ಅದರಲ್ಲೂ ಕಂದಾಯ, ಭೂಮಾಪನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್, ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿ ಮತ್ತು ನೌಕರರ ಮೇಲೆ ಇಂತಹ ಹಲ್ಲೆ,
ದೌರ್ಜನ್ಯಗಳು ನಡೆಯುತ್ತಲೇ ಇವೆ. ಹೀಗಾಗಿ ಎಲ್ಲೆಲ್ಲೂ ಭಯದ ವಾತಾವರಣ ನಿರ್ಮಾಣವಾಗುತ್ತಿದೆ.
ಆದ್ದರಿಂದ ಹಲ್ಲೆಕೋರರನ್ನು ಬಂಧಿಸುವುದರ ಜತೆಗೆ ಕಠಿಣ ಕ್ರಮ ಕೈಗೊಳ್ಳುವಂತಾಗಲು ಕಾನೂನು ರೂಪಿಸಬೇಕೆಂದು ನೌಕರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.