ಗೌರಿಬಿದನೂರು: ನಗರದ ಯಶಸ್ವಿ ಪ.ಪೂ ಕಾಲೇಜಿನ ವಾರ್ಷಿಕೊತ್ಸವ ಸಮಾರಂಭದಲ್ಲಿ ಮನರಂಜನೆ ಹೆಸರಿನಲ್ಲಿ ಮಾರ್ಡನ್ ರಾಮಾಯಣ ಎಂಬ ನಾಟಕದಲ್ಲಿ ರಾಮ, ಸೀತೆ, ಲಕ್ಷ್ಮಣ ಪಾತ್ರಗಳನ್ನು ಅವಹೇಳನ ಕಾರಿಯಾಗಿ ಬಿಂಬಿಸಿದ್ದನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್, ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಕಾರ್ಯಕರ್ತರು ಯಶಸ್ವಿನಿ ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಅಧ್ಯಕ್ಷ ಸಾಗಾನಹಳ್ಳಿ ಶಿವಕುಮಾರ್ ಮಾತನಾಡಿ, ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ಹಿಂದೂ ವಿರೋಧಿ ಧೋರಣೆ ಖಂಡಿಸಿ ಹಿಂದೂ ಧರ್ಮದ ಪದ್ಧತಿ, ನಂಬಿಕೆಗಳನ್ನು ಅವಹೇಳನ ಮಾಡುತ್ತಿರುವುದು ಖಂಡನೀಯ. ಒಬ್ಬರ ನಂಬಿಕೆಯನ್ನು ಅಪಹಾಸ್ಯ ಮಾಡುವಂತಹ ಹಕ್ಕು ನಿಮಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ರಾಮಾಯಣದ ಬಗ್ಗೆ ವಿದ್ಯಾ ರ್ಥಿಗಳಿಗೆ ಉಪನ್ಯಾಸ ಏರ್ಪಡಿಸಿ ಅವರ ಆದರ್ಶಗಳು ತಂದೆ, ತಾಯಿ, ಪಿತೃವಾಕ್ಯ ಪರಿಪಾಲನೆಯಂತ ಧ್ಯೇಯ ಗಳ ಬಗ್ಗೆ ತಿಳಿಸಬೇಕು ಎಂದು ಒತ್ತಾಯಿಸಿದ ಅವರು, ತಪ್ಪಿದರೆ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಆರ್‌ಎಸ್‌ಎಸ್‌ನ ಪ್ರಮುಖರಾದ ವೇಣುಜೀ ಮಾತನಾಡಿ, ಮನುಕುಲಕ್ಕೆ ಬದುಕುವ ಮಾರ್ಗವನ್ನು ತಿಳಿಸಿಕೊಡುವ, ರಾಮಾಯಣವನ್ನೇ ಅವಹೇಳನ ಮಾಡುವುದು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಆಡಳಿತ ಮಂಡಳಿ ಸದರಿ ಪ್ರಕರಣಕ್ಕೆ ಕ್ಷಮೆಯಾಚಿಸ ಬೇಕು. ಇಲ್ಲದಿದ್ದರೆ ಕಠಿಣ ಕಾನೂನು ಹಾಗೂ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕಾಲೇಜಿನ ಪ್ರಾಂಶು ಪಾಲ ಶಶಿಧರ್ ಪ್ರಕರಣಕ್ಕೆ ಸಂಬಂಧಿಸಿ ಬಹಿರಂಗವಾಗಿ ಕ್ಷಮೆಯಾಚಿಸಿ ಮುಂದೆ ಇಂತಹ ಘಟನೆಗಳು ನಡೆಯ ದಂತೆ ನೋಡಿಕೊಳ್ಳುವುದಾಗಿಯೂ ಹಾಗೂ ವಿದ್ಯಾರ್ಥಿ ಗಳಿಗೆ ರಾಮಾಯಣದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾಧ್ಯಕ್ಷ ಸ್ವಾಗತ್ ಜೈನ್, ನಗರಸಭೆ ಸದಸ್ಯ ಮಾರ್ಕೆಟ್ ಮೋಹನ್, ಜಯಣ್ಣ, ನಿಖಿಲ್, ಶಶಿಕುಮಾರ್, ಚರಣ್ ಕುಮಾರ್, ಮುದ್ದುವೀರಪ್ಪ, ಹೇಮಂತ್, ವೆಂಕಟೇಶ್, ಪ್ರಸಾದ್, ಮನೋಹರ್, ದೇವು,ಪವನ್‌ರೆಡ್ಡಿ, ಆನಂದ್, ಸುರೇಶ್, ನವೀನ್, ಮುದ್ದುಕೃಷ್ಣ, ರಾಜೇಶ್, ಚಂದನ್, ಅಂಬರೀಶ್, ಶಿವರಾಜ್ ಮುಂತಾದವರು ಭಾಗವಹಿಸಿದ್ದರು.