ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಕೆಲವೊಂದು ಹೋಬಳಿಗಳನ್ನು ಪ್ರತ್ಯೇಕಗೊಳಿಸಿ ನೂತನವಾಗಿ ಚೇಳೂರು ತಾಲೂಕು ರಚನೆಯಾಗಿರುವ ಬೆನ್ನಲ್ಲೆ ಅಪಸ್ವರ ಶುರುವಾಗಿದೆ.
ಬಾಗೇಪಲ್ಲಿ ತಾಲೂಕಿನಲ್ಲಿದ್ದ ನಾರೇಮುದ್ದೇಪಲ್ಲಿ ಗ್ರಾಮ ಪಂಚಾಯಿತಿಯನ್ನು ಚೇಳೂರು ತಾಲೂಕಿನಲ್ಲಿ ಸೇರಿಸಿರುವ ಕ್ರಮವನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುಧ್ಧ ಅಸಮಾಧಾನ ವ್ಯಕ್ತಪಡಿಸಿದರು.
ನಾರೇಮುದ್ದೇಪಲ್ಲಿ ಗ್ರಾಪಂ ವ್ಯಾಪ್ತಿಗೆ ಬರುವ 13 ಹಳ್ಳಿಗಳನ್ನು ಚೇಳೂರು ತಾಲೂಕಿಗೆ ಸೇರಿಸಿದ್ದಾರೆ ಇದರಿಂದ ಈ ಭಾಗದ ರೈತರು, ವಿದ್ಯಾರ್ಥಿಗಳು, ವಯೋವೃದ್ಧರು ಹಾಗೂ ನಾಗರಿಕರಿಗೆ ತೊಂದರೆಯಾಗಲಿದ್ದು ಕೂಡಲೇ ಜಿಲ್ಲಾಡಳಿತ ನಾರೇಮುದ್ದೆಪಲ್ಲಿ ಗ್ರಾಮ ಪಂಚಾಯಿತಿಯನ್ನು ಬಾಗೇಪಲ್ಲಿ ತಾಲೂಕಿನಲ್ಲಿ ಮುಂದುವರೆಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ನಾರೇಮುದ್ದೇಪಲ್ಲಿಯಿಂದ ಬಾಗೇಪಲ್ಲಿಗೆ ತೆರಳಲು ಉತ್ತಮವಾಗಿ ಸಾರಿಗೆ ಮತ್ತು ಸಂಚರಿಸಲು ಒಳ್ಳೆಯ ರಸ್ತೆಯ ಸೌಲಭ್ಯವಿದೆ. ಆದರೆ ನೂತನವಾಗಿ ರಚನೆ ಮಾಡಿರುವ ಚೇಳೂರು ತಾಲೂಕಿಗೆ ತೆರಳಲು 35 ಕಿ.ಮೀ ಕ್ರಮಿಸಬೇಕಾಗಿದೆ. ಜೊತೆಗೆ ಭೌಗೋಳಿಕವಾಗಿ ಅವೈಜ್ಞಾನಿಕವಾಗಿದೆ. ಸರ್ಕಾರ ಕೂಡಲೇ ನಾರೇಮುದ್ದೇಪಲ್ಲಿ ಗ್ರಾಮ ಪಂಚಾಯಿತಿಯನ್ನು ಬಾಗೇಪಲ್ಲಿ ತಾಲೂಕಿನಲ್ಲಿ ಮುಂದುವರೆಸಬೇಕೆಂದು ಅಪರ ಜಿಲ್ಲಾಧಿಕಾರಿ ಅಮರೇಶ್ ಅವರಿಗೆ ಮನವಿ ಸಲ್ಲಿಸಿದರು.
ಕಂದಾಯ ಇಲಾಖೆಯ ವಿರುದ್ಧ ಕಿಡಿ: ಬಾಗೇಪಲ್ಲಿ ತಾಲೂಕಿನಲ್ಲಿರುವ ನಾರೇಮುದ್ದೇಪಲ್ಲಿ ಗ್ರಾಮ ಪಂಚಾಯಿತಿಯನ್ನು ನೂತನವಾಗಿ ರಚನೆಯಾಗಿರುವ ಚೇಳೂರು ತಾಲೂಕಿನಲ್ಲಿ ಸೇರಿಸುವ ವಿಚಾರದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಈ ಭಾಗದ ಜನರು ಮತ್ತು ಚುನಾಯಿತಿ ಪ್ರತಿನಿಧಿಗಳ ಗಮನಕ್ಕೆ ತಂದಿಲ್ಲ ಜೊತೆಗೆ ಚರ್ಚೆ ಸಹ ಮಾಡಿಲ್ಲ ಆದರೆ ಗ್ರಾಮಸ್ಥರ ಒಪ್ಪಿಗೆ ಪಡೆದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ: ಕಾರಜೋಳ ಸ್ಪಷ್ಟನೆ
ಜಿ.ಪಂ ಅಧ್ಯಕ್ಷ ಬೆಂಬಲ: ಜಿಲ್ಲಾಡಳಿತ ಮುಂದೆ ಧರಣಿ ನಡೆಸುತ್ತಿದ್ದ ನಾರೇಮುದ್ದೇಪಲ್ಲಿ ಗ್ರಾಪಂ ಜನರನ್ನು ಭೇಟಿ ಮಾಡಿದ ಜಿ.ಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ (ಚಿನ್ನಿ) ಚೇಳೂರು ತಾಲೂಕು ರಚನೆಯಾದ ಬಳಿಕ ತಾವು ಹೋರಾಟದ ಹಾದಿಯನ್ನು ಹಿಡಿದಿದ್ದೀರಿ. ಯಾರಾದರೂ ನಾರೇಮುದ್ದೇಪಲ್ಲಿ ಗ್ರಾಪಂ ಚೇಳೂರು ತಾಲೂಕಿಗೆ ಸೇರಿಸಬೇಡಿ ಎಂದು ಹೇಳಿದರೇ ನಾನೇ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುತ್ತಿದ್ದೆ. ಆದರೂ ಸಹ ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ನಾರೇಮುದ್ದೇಪಲ್ಲಿಯನ್ನು ಬಾಗೇಪಲ್ಲಿ ತಾಲೂಕಿನಲ್ಲಿ ಮುಂದುವರೆಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನಾರೇಮುದ್ದೇಪಲ್ಲಿಯ ಮುಖಂಡ ಪ್ರೋ.ಎನ್.ವಿ.ನರಸಿಂಹಯ್ಯ ,ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು