Advertisement
ತಾಲೂಕಿನ ಉಮ್ಮತ್ತೂರು ದೊಡ್ಡಕೆರೆಗೆ ಕಬಿನಿ ನದಿಯಿಂದ ನೀರು ತುಂಬಿಸುವ ಯೋಜನೆಗೆ 2017ರಲ್ಲೇ ಭೂಮಿಪೂಜೆ ನೆರವೇರಿತ್ತು. ಅಂದಿನಿಂದ ಕಾಮಗಾರಿ ಕುಂಟುತ್ತಾ ಸಾಗಿ, 2021 ಆದರೂ ಕೆರೆಗೆ ನೀರು ಹರಿಯಲಿಲ್ಲ. ಇದರಿಂದ ಬೇಸತ್ತ ಅಚ್ಚುಕಟ್ಟುದಾರರು, ರೈತರು, ಗ್ರಾಮಸ್ಥರು 2021ರ ಫೆಬ್ರವರಿ 15 ರಂದು ಚಾಮರಾಜನಗರ ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದರು. ಅಂದು ಜಿಲ್ಲಾಳಿಡಳಿತ ಭವನದ ಆವರಣದಲ್ಲಿ ನಡೆಯುತ್ತಿದ್ದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿದ್ದ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ಅವರು ರೈತರ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಆಗ ರೈತರು ಈ ಯೋಜನೆಯ ವಿಳಂಬಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು.
Related Articles
Advertisement
ಶುಕ್ರವಾರವಷ್ಟೇ ಕಬಿನಿ ನದಿಯಿಂದ ನೀರೆತ್ತುವ ಸುತ್ತೂರಿನ ಕಾರ್ಯಾಗಾರಕ್ಕೆ ತೆರಳಿದ ಸಚಿವ ಎಸ್.ಟಿ. ಸೋಮಶೇಖರ್ ಆ. 31ರೊಳಗೆ ಉಮ್ಮತ್ತೂರು ಕೆರೆಗೆ ನೀರು ಹರಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಆ. 31ರೊಳಗೂ ನೀರು ಹರಿಯುವುದಕ್ಕೆ ಅನುಮಾನ ವ್ಯಕ್ತಪಡಿಸಿದ ರೈತರು, ಶನಿವಾರ ಮಧ್ಯಾಹ್ನ ಉಮ್ಮತ್ತೂರು ದೊಡ್ಡ ಕೆರೆ ಪಕ್ಕದ ಕೊಟ್ಟೂರು ಬಸವೇಶ್ವರ ದೇವಾಲಯದ ಎದುರು ಸಭೆ ನಡೆಸಿದರು. ಅಚ್ಚುಕಟ್ಟುದಾರರು ,ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಸಭೆ ನಡೆಯಿತು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಸಚಿವರು, ಅಧಿಕಾರಿಗಳು ಸುಳ್ಳು ಭರವಸೆ ನೀಡುತ್ತಿದ್ದಾರೆ. ಆ. 31ರೊಳಗೆ ನೀರು ಹರಿಸುವುದು ಅನುಮಾನ. ಶಾಸಕ ಎನ್. ಮಹೇಶ್ ಅವರು ಆ. 31ರೊಳಗೆ ನೀರು ಹರಿಸದಿದ್ದರೆ ಚಳವಳಿಯಲ್ಲಿ ಭಾಗವಹಿಸಬೇಕು. ಇಲ್ಲದಿದ್ದರೆ ಅವರು ವಚನಭ್ರಷ್ಟರಾದಂತೆ ಎಂದು ಟೀಕಿಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಮಾತನಾಡಿ, ಆ. 31ರಂದು ನೀರು ಹರಿಸದಿದ್ದರೆ, ಸುತ್ತೂರಿನಲ್ಲಿ ರೈತ ಮಹಿಳೆಯೊಬ್ಬರ ಕೈಯಲ್ಲಿ ಉದ್ಘಾಟಿಸಲಾಗುವುದು. ಇದಕ್ಕೆ ಅವಕಾಶ ದೊರಕದಿದ್ದರೆ ಸುತ್ತೂರು ಶ್ರೀಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದು, ಅಲ್ಲಿಯೇ ಚಳವಳಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಶನಿವಾರ ಸಂಜೆಯಿಂದಲೇ ಪ್ರತಿಭಟನೆ ಆರಂಭಿಸಲು ನಿರ್ಧರಿಸಿ, ಅಲ್ಲಿಯೇ ಶಾಮಿಯಾನ ಹಾಕಿ, ಮಹಾತ್ಮಾಗಾಂಧಿ ಭಾವಚಿತ್ರ ಇರಿಸಿ ಧರಣಿ ಆರಂಭಿಸಿದರು. ಆ. 31ರವೆರೆಗೂ ಅದೇ ಸ್ಥಳದಲ್ಲಿ ರಾತ್ರಿ ಹಗಲು ಎನ್ನದೇ ನಿರಂತರ ಧರಣಿ ನಡೆಸಲು ರೈತರು ತೀರ್ಮಾನಿಸಿದ್ದಾರೆ.
ರೈತ ಮುಖಂಡರಾದ ಹೊನ್ನೂರು ಬಸವಣ್ಣ, ಹೆಗ್ಗವಾಡಿಪುರ ಮಹದೇವಸ್ವಾಮಿ, ದಾಸನೂರು ಮಲ್ಲಣ್ಣ, ಅಗ್ರಹಾರ ಮಂಜುನಾಥ್, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಉಮ್ಮತ್ತೂರು, ಜನ್ನೂರು, ಮೂಡಲ ಅಗ್ರಹಾರ, ಚುಂಚನಹಳ್ಳಿ, ಹನುಮನಪುರ, ಹಳ್ಳಿಕೆರೆಹುಂಡಿ, ಹೊಮ್ಮ, ದಾಸನೂರು, ಹೆಗ್ಗವಾಡಿ, ಹೆಗ್ಗವಾಡಿಪುರದ ಗ್ರಾಮಸ್ಥರು ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.