ದಾವಣಗೆರೆ: ರಾಜ್ಯದಲ್ಲಿನ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೇ ಎಲ್ ಕೆಜಿ, ಯುಕೆಜಿ ಪ್ರಾರಂಭಿಸುವ ಮೂಲಕ ಐಸಿಡಿಎಸ್ ಯೋಜನೆ ಉಳಿಸುವುದು ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎಐಟಿಯುಸಿ) ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಸರ್ಕಾರಿ ಶಾಲೆಯಲ್ಲೇ ಎಲ್‌ಕೆಜಿ, ಯುಕೆಜಿ ಪ್ರಾರಂಭ ಮಾಡುವುದರಿಂದ ಅಂಗನವಾಡಿಗೆ ಬರುವಂತಹ ಮಕ್ಕಳ ಸಂಖ್ಯೆ ಕಡಿಮೆ ಆಗಲಿದೆ. ಮಕ್ಕಳ ಸಂಖ್ಯೆಯೇ ಇಲ್ಲ ಎಂದು ಮುಂದೆ ಕೇಂದ್ರಗಳನ್ನೇ ಮುಚ್ಚುವಂತಹ ವಾತಾವರಣ ನಿರ್ಮಾಣವಾಗಬಹುದು. ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿನ ಸಹಾಯಕಿ ಯರು ಮತ್ತು ಕಾರ್ಯಕರ್ತೆಯರ ಜೊತೆಗೆ ಮಕ್ಕಳು, ಪೋಷಕರಿಗೂ ಅನುಕೂಲ ಆಗಲಿದೆ. ಸರ್ಕಾರ ಏನಾದರೂ ಸರ್ಕಾರಿ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸಿದಲ್ಲಿ ಕಾರ್ಯಕರ್ತೆಯರು, ಸಹಾಯಕಿಯರ ಜೀವನಕ್ಕೆ ಭಾರೀ ತೊಂದರೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರ ಅಂಗನವಾಡಿ ಕೇಂದ್ರಗಳನ್ನೇ ಸಶಕ್ತಗೊಳಿಸಬೇಕು. ಹಲವಾರು ವರ್ಷದಿಂದ ಗೌರವ ಧನದ ಹೆಸರಲ್ಲಿ ಕಡಿಮೆ ವೇತನದೊಂದಿಗೆ ಬಹುತೇಕ ಎಲ್ಲಾ ಇಲಾಖೆ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರ್ಕಾರಿನೌಕರರು ಎಂದು ಪರಿಗಣಿಸಿ, ಕೆಲಸ ಖಾಯಂ ಮಾಡಬೇಕು. ಆರೋಗ್ಯ ವಿಮೆ, ಭವಿಷ್ಯನಿಧಿ ಇತರೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಹಿಸಿಕೊಂಡಿರುವ ಸಚಿವರು ಒಮ್ಮೆಯೂ ಈವರೆಗೆ ಅಂಗನವಾಡಿಕಾರ್ಯಕರ್ತೆಯರು, ಸಹಾಯಕಿಯರ ಸಭೆ ನಡೆಸಿ, ಸಮಸ್ಯೆಗಳ ಬಗ್ಗೆ ಚರ್ಚಿಸುವ ಗೋಜಿಗೂ ಹೋಗಿಲ್ಲ.ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗೆ ಸ್ಪಂದಿಸದ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು
ಕೋವಿಡ್ ವಾರಿಯರ್ಸ್‌ಗಳಾಗಿ ಸೇವೆ ಮಾಡುತ್ತಿರುವ ಸಂದರ್ಭದಲ್ಲಿ ಮೃತಪಟ್ಟಿರುವ ಜಿಲ್ಲೆಯ 6 ಜನ ಒಳಗೊಂಡಂತೆ 25 ಜನ ಕಾರ್ಯಕರ್ತೆಯರ ಕುಟುಂಬಗಳಿಗೆ ಗೆ ಸರ್ಕಾರಿ ನಿಯಮದಂತೆ ಕೂಡಲೇ 30 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಎಐಟಿಯುಸಿ ರಾಜ್ಯ ಅಧ್ಯಕ್ಷ ಎಚ್. ಕೆ. ರಾಮಚಂದ್ರಪ್ಪ, ಆವರಗೆರೆ ಎಚ್.ಜಿ. ಉಮೇಶ್, ಎಂ.ಬಿ. ಶಾರದಮ್ಮ, ಎಸ್.ಎಸ್. ಮಲ್ಲಮ್ಮ, ಆವರಗೆರೆ ಚಂದ್ರು, ಆವರಗೆರೆ ವಾಸು, ಐರಣಿ ಚಂದ್ರು, ಕಾಳಮ್ಮ, ಸುಧಾ, ರೇಣುಕಮ್ಮ ಇತರರು ಇದ್ದರು.