ದಾವಣಗೆರೆ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಯಮಕನಮರಡಿ ಕ್ಷೇತ್ರದ ಶಾಸಕ, ಮಾನವ ಬಂಧುತ್ವ ವೇದಿಕೆಯ ಪ್ರಮುಖ ರೂವಾರಿ ಸತೀಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಭಾನುವಾರ ಜಯದೇವ ವೃತ್ತದಲ್ಲಿ ಮಾನವ ಬಂಧುತ್ವ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಪ್ರಗತಿಪರ ಚಿಂತಕ, ಸಾಮಾಜಿಕ ಕಳಕಳಿಯ ವಾಲ್ಮೀಕಿ ಸಮಾಜದ ಮುಖಂಡ ಸತೀಶ್ ಜಾರಕಿಹೊಳಿ ಅವರಿಗೆ ರಾಜಕೀಯ ಕುತಂತ್ರಕ್ಕಾಗಿ ಸಚಿವ ಸ್ಥಾನ ತಪ್ಪಿಸಿರುವುದು ಅತ್ಯಂತ ಖಂಡನೀಯ. ಸತೀಶ್ ಜಾರಕಿಹೊಳಿಯವರು 222 ಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸಿನ ಆಧಾರದಲ್ಲಿ ಮತ್ತು ವೈಚಾರಿಕ ಚಿಂತನೆಯವರನ್ನು ಒಗ್ಗೂಡಿಸಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ದರು. ಅಂತಹವರನ್ನೇ ಅಧಿಕಾರದಿಂದ ದೂರ ಇಡಲಾಗಿದೆ ಎಂದು ದೂರಿದರು.
ವಾಲ್ಮೀಕಿ ಸಮಾಜದ ಪ್ರಮುಖ ನಾಯಕರಾಗಿದ್ದರೂ ಎಲ್ಲ ಶೋಷಿತ, ದಮನಿತ ಸಮಾಜದವರನ್ನು ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ದಲಿತ ಸಮುದಾಯವನ್ನೇ ಕಡೆಗಣಿಸದಂತಾಗಿದೆ. ಕೂಡಲೇ ಅವರಿಗೆ ಸೂಕ್ತ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಕಳೆದ ಚುನಾವಣೆಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಎಲ್ಲರೂ ಸತೀಶ್ ಜಾರಕಿಹೊಳಿಯವರನ್ನು ಬಳಸಿಕೊಂಡು ಈಗ ಕಡೆಗಣಿಸಿರುವುದು, ಅಧಿಕಾರದಿಂದ ದೂರವಿಡುವ ಕುತಂತ್ರ ನಡೆಸಿರುವುದು ಖಂಡನೀಯ. ಕೂಡಲೇ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದಲ್ಲಿ, ಅನಿವಾರ್ಯವಾಗಿ ರಾಜ್ಯದ್ಯಾಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ವೇದಿಕೆ ವಿಭಾಗೀಯ ಸಂಚಾಲಕ ರಾಘು ದೊಡ್ಮನಿ, ಡಾ| ಎ.ಬಿ. ರಾಮಚಂದ್ರಪ್ಪ, ಬುಳಸಾಗರದ ಸಿದ್ದರಾಮಣ್ಣ, ಮಾಡಾಳ್ ಶಿವಕುಮಾರ್, ಧನ್ಯಕುಮಾರ್, ಪವಿತ್ರಾ, ಮಂಜುನಾಥ್, ಶ್ರೀನಿವಾಸ್ ಟಿ. ದಾಸಕರಿಯಪ್ಪ, ಬಸವರಾಜ್, ಶಾಮನೂರು ಪ್ರವೀಣ್, ಹಾಲೇಕಲ್ಲು ಗೋವಿಂದು, ಗಣೇಶ್ ಕುಂದುವಾಡ, ಮಾರುತಿ ಕರೂರು ಇದ್ದರು