Advertisement

ದೊರೆಸ್ವಾಮಿ ವಿರುದ್ಧ ಯತ್ನಾಳ ಟೀಕೆಗೆ ಖಂಡನೆ

11:19 AM Mar 03, 2020 | Suhan S |

ಕಲಬುರಗಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿ ನಗರದ ಸಾರ್ವಜನಿಕ ಉದ್ಯಾನವನದಲ್ಲಿನ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಪ್ರಗತಿಪರ ಹಾಗೂ ಸಂವಿಧಾನಪರ ಸಂಘಟನೆಗಳ ಒಕ್ಕೂಟ ಮತ್ತು ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಕಾರ್ಯಕರ್ತರು ಪ್ರತಿಭಟನಾ ಧರಣಿ ನಡೆಸಿದರು.

Advertisement

ಯತ್ನಾಳರ ಹೇಳಿಕೆಗಳನ್ನು ಬಿಜೆಪಿ ಸಮರ್ಥಿಸಿಕೊಳ್ಳುವುದನ್ನು ಖಂಡಿಸಿದ ಪ್ರತಿಭಟನೆಕಾರರು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಸಂಘ ಪರಿವಾರದವರಿಗೆ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಕಂಡರೆ ಮೊದಲಿನಿಂದಲೂ ಅಷ್ಟಕ್ಕಷ್ಟೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರ ಪರವಾಗಿದ್ದ ಸಂಘಗಳು ಇಂದು ದೇಶಿಯ ಮತ್ತು ವಿದೇಶಿ ಬಹುರಾಷ್ಟ್ರೀಯ ಕಾರ್ಪೋರೇಟ್‌ ಕಂಪೆನಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜನಸಾಮಾನ್ಯರ, ರೈತರ, ಕಾರ್ಮಿಕರ, ಯುವಜನರ, ಮಹಿಳೆಯರ ಹಕ್ಕುಗಳ ಕುರಿತು ಮಾತನಾಡುವವರು, ಸರ್ಕಾರಗಳ ಜನವಿರೋಧಿ ನೀತಿಗಳನ್ನು ವಿರೋಧಿ ಸುವವರಿಗೆ ದೇಶದ್ರೋಹದ, ಪಾಕಿಸ್ತಾನ ಪರ, ನಗರದ ನಕ್ಸಲರು ಎನ್ನುವಂತೆ ಬಿಂಬಿಸಿ ಅವರನ್ನು ಜೈಲಿಗೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು. ಅದರ ಭಾಗವಾಗಿಯೇ ಯತ್ನಾಳರು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಅವರ ಕುರಿತು ಕೆಟ್ಟದ್ದಾಗಿ ಮಾತನಾಡಿದ್ದಾರೆ. ಬಿಜೆಪಿ ಹಿರಿಯ ನಾಯಕರು ಇದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಉಳಿದ ಬಿಜೆಪಿ ನಾಯಕರು ಪ್ರತಿಕ್ರಿಯೆ ಕೊಡದೇ ಮೌನವಾಗಿದ್ದಾರೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಸ್ವಾತಂತ್ರ್ಯದ ಹಾಗೂ ಸ್ವಾತಂತ್ರ್ಯ  ಹೋರಾಟಗಾರರ ಕುರಿತು ಕಿಂಚಿತ್ತೂ ಗೌರವ ಇದ್ದರೆ ಯತ್ನಾಳರ ಹೇಳಿಕೆಯನ್ನು ಖಂಡಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದರು.

ಭಾರತೀಯ ಕಮ್ಯುನಿಸ್ಟ್‌ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ| ಸಿದ್ದನಗೌಡ ಪಾಟೀಲ, ಪ್ರೊ. ಆರ್‌.ಕೆ. ಹುಡಗಿ, ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ, ಅರ್ಜುನ ಭದ್ರೆ, ಮಾರುತಿ ಎಂ. ಗೋಖಲೆ, ಭೀಮಾಶಂಕರ ಮಾಡಿಯಾಳ, ಸನತಕುಮಾರ ಬೆಳಗಲಿ, ದತ್ತಾತ್ರೇಯ ಇಕ್ಕಳಕಿ, ಡಾ| ಮಹೇಶಕುಮಾರ ರಾಠೊಡ, ಅಶ್ವಿ‌ನಿ ಮದನಕರ, ಲಕ್ಷ್ಮೀಕಾಂತ ಹುಬ್ಬಳ್ಳಿ, ಹಣಮಂತ ಯಳಸಂಗಿ, ಎಚ್‌.ಎಸ್‌. ಪತಕಿ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next