ಚಿಕ್ಕಮಗಳೂರು: ಉತ್ತರ ಪ್ರದೇಶದಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಹತ್ಯಾಚಾರದ ರಾಕ್ಷಸಿ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಕೃತ್ಯ ನಡೆಸಿದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಎಚ್. ದೇವರಾಜ್ ಒತ್ತಾಯಿಸಿದರು.
ಶನಿವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಸಮಿತಿ, ರಾಜಕೀಯ ಪಕ್ಷ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳು ಹತ್ಯಾಚಾರ ಕೃತ್ಯ ನಡೆಸಿದ ಆರೋಪಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡಿದರು.
ದಲಿತ ಯುವತಿ ಅತ್ಯಾಚಾರ ಪ್ರಕರಣದ ಸಾಕ್ಷ್ಯನಾಶಕ್ಕೆ ಪೊಲೀಸರ ಮೂಲಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಮುಂದಾಗಿದ್ದು, ಈ ಕ್ರಮ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ಪಿ ಜಿಲ್ಲಾ ಕಾರ್ಯದರ್ಶಿ ಪರಮೇಶ್ ಮಾತನಾಡಿ, ಉತ್ತರ ಪ್ರದೇಶದಲ್ಲಿ ರಾಮನ ದೇವಾಲಯ ನಿರ್ಮಿಸಲಾಗುತ್ತಿದೆ. ಅದೇ ರಾಜ್ಯ ರಾಕ್ಷಸ ರಾಜ್ಯವಾಗಿ ಪರಿರ್ವನೆಯಾಗುತ್ತಿದೆ. ಅತ್ಯಾಚಾರಕ್ಕೆ ಒಳಗಾದ ಯುವತಿ ಬದುಕಿದರೆ ಠಾಕೂರ್ ಸಮುದಾಯದ ಆರೋಪಿಗಳು ಗಲ್ಲಿಗೇರುತ್ತಾರೆಂಬ ಕಾರಣಕ್ಕೆ ಯುವತಿಯ ಶವವನ್ನು ರಾತ್ರೋರಾತ್ರಿ ಸುಟ್ಟುಹಾಕಿ ಸಾಕ್ಷé ನಾಶಪಡಿಸಲಾಗಿದೆ ಎಂದರು.
ಸಿಪಿಐ ಪಕ್ಷದ ಮುಖಂಡ ಬಿ.ಅಮ್ಜದ್ ಮಾತನಾಡಿ, ಮೋದಿ ಸರ್ಕಾರ ಅಧಿ ಕಾರಕ್ಕೆ ಬಂದ ಹೊಸದರಲ್ಲಿ ದೇಶ ಸುರಕ್ಷಿತರ ಕೈಯಲ್ಲಿದೆ ಎಂದಿದ್ದರು. ಆದರೆ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಎಂದು ದಾಖಲೆಗಳು ಹೇಳುತ್ತಿವೆ. ಯೋಗಿ ಸರಕಾರ ಮಹಿಳೆಯರ ಪರ ಇದೆ ಎಂದಾದರೆ ಆರೋಪಿಗಳಿಗೆ ಗಲ್ಲುಶಿಕ್ಷೆ ಕೊಡಿಸಲಿ ಎಂದರು.
ವಿದ್ಯಾರ್ಥಿ ಸಂಘಟನೆ ಲೋಕೇಶ್ ಮಾವಿನಗುಣಿ ಮಾತನಾಡಿದರು. ಧರಣಿಯಲ್ಲಿ ಆಮ್ ಆದ್ಮಿ ಪಕ್ಷದ ಸುಂದರ್ ಗೌಡ, ದಸಂಸ ಮರ್ಲೆ ಅಣ್ಣಯ್ಯ, ಬಿಎಸ್‌ಪಿ ಕೆ.ಟಿ. ರಾಧಾಕೃಷ್ಣ, ಸುಧಾ, ಕಾಂಗ್ರೆಸ್ ಪಕ್ಷದ ಹಿರೇಮಗಳೂರು ರಾಮಚಂದ್ರ, ಎಸ್‌ಡಿಪಿಐ ಪಕ್ಷದ ಅಜ್ಮತ್ ಪಾಶ, ಸಂವಿಧಾನ ಉಳಿಸಿದ ಸಂಘದ ಗೌಸ್ ಮೊಹಿದ್ದೀನ್, ಗೌಸ್ ಮುನೀರ್ ಇದ್ದರು.