ಕಲಬುರಗಿ: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ವಿಫಲವಾದ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಹತ್ರಾಸ್ ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಮುಚ್ಚಿ ಹಾಕುವಲ್ಲಿ ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ರಾತ್ರೋರಾತ್ರಿ ಯುವತಿಯ ಶವ ಸಂಸ್ಕಾರ ಮಾಡಿದ್ದಾರೆ.ಅವರ ಮನೆಯವರಿಗೂ ತಿಳಿಸದೆ ಇರುವುದುಖಂಡನೀಯವಾಗಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಂತ್ರಸ್ತ ಕುಟುಂಬಸ್ಥರ ಭೇಟಿಗೆ ಮಾಧ್ಯಮದವರಿಗೂ ಮನೆಗೆ ಹೋಗಲು ಅವಕಾಶ ನೀಡುತ್ತಿಲ್ಲ. ಠಾಕೂರ್ ಮನೆತನಕ್ಕೆ ಸೇರಿದ ದುರುಳರೇ ಈ ಕೃತ್ಯ ಎಸಗಿದ್ದು, ಇದು ಮುಖ್ಯಮಂತ್ರಿಗಳಿಗೂ ಗೊತ್ತಿದೆ. ಅತ್ಯಾಚಾರಿಗಳನ್ನು ಮುಖ್ಯಮಂತ್ರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಹತ್ರಾಸ್ ಯುವತಿ ಮಾತ್ರವಲ್ಲ ಉತ್ತರ ಪ್ರದೇಶದಲ್ಲಿ ದಲಿತ ಯುವತಿಯರು, ಬಾಲಕಿಯರ ಅತ್ಯಾಚಾರ, ಕೊಲೆಗಳು ನಡೆಯುತ್ತಲೇ ಇವೆ.ಬಲತ್ಕಾರದ ಮೂಲಕ ಮಹಿಳೆಯರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಹೆಣ್ಣು ಮಕ್ಕಳಿಗೆ ರಕ್ಷಣವೇ ಇಲ್ಲದಂತಾಗಿದೆ. ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಯುವತಿಯರ ದಲಿತರ ಕುಟುಂಬಸ್ಥರಿಗೆ ಸರ್ಕಾರ ರಕ್ಷಣೆ ನೀಡಬೇಕು. ಆ ಕುಟುಂಬಗಳಿಗೆ ತಲಾ ಒಂದು ಕೋಟಿ ರೂ. ಪರಿಹಾರ ಕಲ್ಪಿಸಬೇಕು. ಅಲ್ಲಿನ ಅತ್ಯಾಚಾರ ಪ್ರಕರಣ ಬಯಲಿಗೆಳೆದ ಮಾಧ್ಯಮದವರಿಗೂ ಸೂಕ್ತರಕ್ಷಣೆ ನೀಡಬೇಕು. ಜನರ ಪ್ರಾಣ-ಮಾನ ರಕ್ಷಣೆ ಮಾಡುವಲ್ಲಿ ವಿಫಲರಾರ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವನ್ನು ವಜಾಗೊಳಬೇಕು ಎಂದು ಒತ್ತಾಯಿಸಿ ರಾಷ್ಟ್ರಪತಿಗಳಿಗೆ ಜಿಲ್ಲಾಧಿಕಾರಿ ಮೂಲಕ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕಡಿ.ಜಿ. ಸಾಗರ, ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ, ಪ್ರಮುಖರಾದ ಎಸ್.ಪಿ.ಸುಳ್ಳದ್, ಕೃಷ್ಣಪ್ಪ ಕಾರಣಿಕ, ಉಮೇಶ ನರೋಣ, ರೇವಣಸಿದ್ಧಪ್ಪ ಜಾಲಿ, ಮಲ್ಲಣ್ಣ ಕೊಡಚಿ, ಬಿ.ಸಿ.ವಾಲಿ, ರಾಜು ಸಂಕಾ, ಜೈಭೀಮ ಕೊರಳ್ಳಿ ಮುಂತಾದವರು ಭಾಗವಹಿಸಿದ್ದರು.