Advertisement

ಕನ್ಹಯ್ಯ ಹತ್ಯೆಗೆ ದೇಶಾದ್ಯಂತ ಆಕ್ರೋಶ

08:32 AM Jul 01, 2022 | Team Udayavani |

ಉದಯಪುರ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್‌ ಕನ್ಹಯ್ಯಲಾಲ್‌ ಹತ್ಯೆ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಗುರುವಾರವೂ ದೇಶಾದ್ಯಂತ ಪ್ರತಿಭಟನ ಮೆರವಣಿಗೆಗಳು ನಡೆದಿವೆ.

Advertisement

ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ಸಹಿತ ವಿವಿಧ ರಾಜ್ಯಗಳಲ್ಲಿ ಜನರು ಬೀದಿಗಿಳಿದು ಈ ಅಮಾನುಷ ಕೃತ್ಯವನ್ನು ಖಂಡಿಸಿದ್ದಾರೆ.

ಉದಯಪುರದಲ್ಲಿ ಗುರುವಾರ ಮಾರುಕಟ್ಟೆ ಬಂದ್‌ಗೆ ಸಂಪೂರ್ಣ ಸ್ಪಂದನೆ ವ್ಯಕ್ತವಾಗಿದ್ದು, ವ್ಯಾಪಾರಿಗಳು ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿ  ಪ್ರತಿಭಟಿಸಿದ್ದಾರೆ. ನಗರದಲ್ಲಿ ಸಾವಿರಾರು ಮಂದಿ ಮೆರವಣಿಗೆಯನ್ನೂ ನಡೆಸಿದ್ದಾರೆ. ಸರ್ವ ಹಿಂದೂ ಸಮಾಜ್‌ ಸಂಘಟನೆಯು ಮೌನ ಮೆರವಣಿಗೆ ಆಯೋಜಿಸಿದ್ದ ಹಿನ್ನೆಲೆಯಲ್ಲಿ ಕರ್ಫ್ಯೂ ಸಡಿಲಿಸಲಾಗಿತ್ತು. ಮೆರವಣಿಗೆ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ಸಣ್ಣಮಟ್ಟಿನ ಘರ್ಷಣೆ, ಕಲ್ಲು ತೂರಾಟದಂಥ ಘಟನೆಗಳು ನಡೆದಿರುವುದು ಬಿಟ್ಟರೆ, ಉಳಿದಂತೆ ಎಲ್ಲವೂ ಶಾಂತಿಯುತವಾಗಿತ್ತು. ಮಧ್ಯಪ್ರದೇಶದ ಇಂದೋರ್‌ನಲ್ಲಿ ಅರ್ಧ ದಿನ ಮಾರುಕಟ್ಟೆ ಮುಚ್ಚಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದರು.

ಕನ್ಹಯ್ಯ ಮನೆಗೆ ಸಿಎಂ ಭೇಟಿ :

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರು ಗುರುವಾರ  ಕನ್ಹಯ್ಯಲಾಲ್‌ ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯು ಇಡೀ ದೇಶದ ಪ್ರಜ್ಞೆಯನ್ನೇ ಕಲಕಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು  ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ಕೊಂಡೊಯ್ಯಲಿದೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.

Advertisement

ಬಿಜೆಪಿಯಿಂದ 1.35 ಕೋಟಿ ರೂ. ಸಂಗ್ರಹ :

ಕನ್ಹಯ್ಯಲಾಲ್‌ ಕುಟುಂಬಕ್ಕೆ 12 ಸಾವಿರಕ್ಕೂ ಹೆಚ್ಚು ಮಂದಿ ನೆರವು ನೀಡಿದ್ದು, ಒಟ್ಟು 1.35 ಕೋಟಿ ರೂ. ಸಂಗ್ರಹವಾಗಿದೆ. ಬಿಜೆಪಿ ನಾಯಕ ಕಪಿಲ್‌ ಮಿಶ್ರಾ ಅವರ ನೇತೃತ್ವದಲ್ಲೇ ದೇಣಿಗೆ ಸಂಗ್ರಹಿಸಲಾಗಿದ್ದು, ಸದ್ಯದಲ್ಲೇ  ಕುಟುಂಬಕ್ಕೆ ಮೊತ್ತವನ್ನು ಹಸ್ತಾಂತರಿಸುವುದಾಗಿ ಅವರು ಹೇಳಿದ್ದಾರೆ.

ರಾಜ್ಯದಲ್ಲೂ ಪ್ರತಿಭಟನೆ :

ಬೆಂಗಳೂರು:  ಕನ್ಹಯ್ಯ ಹತ್ಯೆ ವಿರುದ್ಧದ ಆಕ್ರೋಶ ಕರ್ನಾಟಕದಲ್ಲೂ ಪ್ರತಿಧ್ವನಿಸಿದೆ. ಗುರುವಾರ ಹಾಸನ, ಮೈಸೂರು, ಮಂಡ್ಯ, ತುಮಕೂರು, ದಕ್ಷಿಣಕನ್ನಡ ಸಹಿತ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಬಿಜೆಪಿ, ಹಿಂದೂಪರ ಸಂಘಟನೆಗಳು ಬೃಹತ್‌ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿವೆ. ಹಾಸನದ ಎನ್‌.ಆರ್‌. ವೃತ್ತದಲ್ಲಿ ಸ್ವಲ್ಪ ಹೊತ್ತು ಮಾನವ ಸರಪಳಿಯನ್ನೂ ರಚಿಸಲಾಯಿತು. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ವಿಹಿಂಪ, ಬಜರಂಗದಳ ವತಿಯಿಂದ ಪ್ರತಿಭಟನೆ ನಡೆಯಿತು. ಹಂತಕರಿಗೆ ಆಶ್ರಯ ನೀಡಿರುವ ವ್ಯಕ್ತಿಗಳು ಮತ್ತು ಸಂಘಟನೆ ಬಗ್ಗೆ ಎನ್‌ಐಎ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ತುಮಕೂರಿನಲ್ಲಿ   ಪ್ರತಿಭಟನಕಾರರು ಆಗ್ರಹಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next