Advertisement

ರಾಜಕೀಯ ಉದ್ದೇಶದಿಂದ ವರ್ಗಾವಣೆ: ಆರೋಪ

12:04 PM Aug 29, 2018 | Team Udayavani |

ಮಹಾನಗರ: ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ಪ್ರವೀಣ್‌ಚಂದ್ರ ಕರ್ಕೇರ ಅವರನ್ನು ದಿಢೀರ್‌ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಹಾಗೂ ನಗರದ ಪುರಭವನಕ್ಕೆ ಕುದ್ಮುಲ್‌ ರಂಗರಾವ್‌ ಅವರ ಹೆಸರನ್ನು ಇರಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಎಸ್‌.ಸಿ. ಮೋರ್ಚಾ ಘಟಕದ ನೇತೃತ್ವದಲ್ಲಿ ಮಂಗಳವಾರ ಲಾಲ್‌ಬಾಗ್‌ನಲ್ಲಿರುವ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Advertisement

ಬಿಜೆಪಿ ಎಸ್‌.ಸಿ. ಮೋರ್ಚಾ ಘಟಕದ ರಾಜ್ಯ ಕಾರ್ಯದರ್ಶಿ ವಸಂತ್‌ ವಿ.ಎಸ್‌. ಅವರು ಮಾತನಾಡಿ, ಪ್ರವೀಣ್‌ ಚಂದ್ರ ಕರ್ಕೇರ ಅವರು ಇತ್ತೀಚೆಗೆ ರಸ್ತೆ ಬದಿಯ ಅನಧಿಕೃತ ಫ್ಲೆಕ್ಸ್‌ ಮತ್ತು ಹೋರ್ಡಿಂಗ್ಸ್‌ ಗಳನ್ನು ತೆರವು ಮಾಡಿಸಿದ್ದು, ಈ ಕಾರಣಕ್ಕಾಗಿ ರಾಜಕೀಯ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲಾಗಿದೆ. ಅವರು ದಕ್ಷ, ಪ್ರಾಮಾಣಿಕ ಅಧಿಕಾರಿಯಾಗಿದ್ದು, ಹೈಕೋರ್ಟ್‌ ಆದೇಶ ಹಾಗೂ ಮೇಲಧಿಕಾರಿಗಳ ಸೂಚನೆಯಂತೆ ರಸ್ತೆ ಬದಿಯ ಅನಧಿಕೃತ ಫ್ಲೆಕ್ಸ್‌ಗಳನ್ನು ತೆರವು ಮಾಡಿದ್ದರು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕಾಂಗ್ರೆಸಿಗರು ದಕ್ಷ ಹಾಗೂ ದಲಿತ ಸಮುದಾಯಕ್ಕೆ ಸೇರಿದ ಅಧಿಕಾರಿಯನ್ನು ವರ್ಗಾವಣೆ ಮಾಡುವ ಮೂಲಕ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಇದು ಖಂಡನೀಯ ಹಾಗೂ ವರ್ಗಾವಣೆಯಾದ ಅಧಿಕಾರಿಯನ್ನು ಮರು ನೇಮಿಸಬೇಕು. ಇಲ್ಲವಾದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದರು.

ಅಹೋರಾತ್ರಿ ಭಜನೆ: ಎಚ್ಚರಿಕೆ
ಬಿಜೆಪಿ ಎಸ್‌.ಸಿ. ಮೋರ್ಚಾದ ಜಿಲ್ಲಾ ಅಧ್ಯಕ್ಷ ದಿನೇಶ್‌ ಅಮ್ಟೂರು ಮಾತನಾಡಿ, ಸಾಂಕೇತಿಕವಾಗಿ ಈಗ ಪ್ರತಿಭಟನೆ ನಡೆಸಲಾಗಿದೆ. ಮುಂದಿನ ಒಂದು ವಾರದೊಳಗೆ ಪ್ರವೀಣ್‌ಚಂದ್ರ ಅವರ ವರ್ಗಾವಣೆ ರದ್ದತಿಗೆ ಹಾಗೂ ಪುರಭವನಕ್ಕೆ ಕುದ್ಮುಲ್‌ ರಂಗರಾವ್‌ ಅವರ ಹೆಸರನ್ನಿಡಲು ಕ್ರಮ ಕೈಗೊಳ್ಳದಿದ್ದರೆ ಪಾಲಿಕೆ ಎದುರು ಅಹೋರಾತ್ರಿ ಭಜನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಬಿಜೆಪಿ ಎಸ್‌.ಸಿ. ಮೋರ್ಚಾ ಘಟಕದ ಪ್ರಮುಖರಾದ ಉಮಾನಾಥ್‌ ಅಮೀನ್‌, ಅಮಿತಕಲಾ, ಉಮೇಶ್‌ ಕೋಟ್ಯಾನ್‌, ವಿನಯ್‌ ನೇತ್ರ ಮೊದಲಾದವರು ನೇತೃತ್ವ ವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next