Advertisement

ಶುಲ್ಕ ವಸೂಲಿ ವಿರುದ್ಧ ಪ್ರತಿಭಟನೆ

03:04 PM Feb 12, 2020 | Suhan S |

ಕುಮಟಾ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಐಆರ್‌ಬಿ ಕಂಪೆನಿ ಕಾಮಗಾರಿ ಮುಗಿಸದೆ, ಏಕಾಏಕಿ ಶುಲ್ಕ ವಸೂಲಾತಿ ಪ್ರಾರಂಭಿಸಿರುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಹಾಗೂ ಸಾರ್ವಜನಿಕರು ತಾಲೂಕಿನ ಹೊಳೆಗದ್ದೆ ಟೋಲ್‌ ನಾಕಾ ಎದುರು ಪ್ರತಿಭಟನೆ ನಡೆಸಿ, ಐಆರ್‌ಬಿ ಕಂಪೆನಿ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ನೇತೃತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಮಾತನಾಡಿ, ಕುಂದಾಪುರದಿಂದ ಉತ್ತರಕನ್ನಡದವರೆಗೆ ಐಆರ್‌ಬಿ ಕಂಪೆನಿ ನಡೆಸಿದ ಚತುಷ್ಪಥ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಜಿಲ್ಲೆಯ ಜನರಿಗೆ ಬಹಳಷ್ಟು ಅನ್ಯಾಯ ಮಾಡಿದ್ದಾರೆ. ಹೆದ್ದಾರಿಗಾಗಿ ಸ್ವಾಧೀನಪಡಿಸಿಕೊಂಡ ಭೂ ಮಾಲಿಕರಿಗೆ ಇನ್ನೂ ಪರಿಹಾರ ನೀಡಿಲ್ಲ. ಶೇ.75 ರಷ್ಟು ಕಾಮಗಾರಿ ಮುಗಿಸದೇ, ಟೋಲ್‌ ವಸೂಲಿ ಮಾಡುವ ಮೂಲಕ ಹಗಲು ದರೋಡೆ ನಡೆಸುತ್ತಿದ್ದಾರೆ.

ಕರಾವಳಿ ಭಾಗದ ಶಾಸಕರು ಹಾಗೂ ಸಂಸದ ಅನಂತಕುಮಾರ ಹೆಗಡೆ ಕೈಕಟ್ಟಿ ಕುಳಿತುಕೊಂಡಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಸಂಪೂರ್ಣ ರಸ್ತೆ ಕಾಮಗಾರಿ ಮುಗಿಸಿ ಟೋಲ್‌ ವಸೂಲಿ ಪ್ರಾರಂಬಿಸಲಿ ಹಾಗೂ ಸ್ಥಳೀಯ ನೋಂದಣಿ ವಾಹನಗಳಿಂದ ಶುಲ್ಕ ವಸೂಲಿ ಮಾಡಬಾರದು. ಜಿಲ್ಲಾಡಳಿತ, ಜಿಲ್ಲಾಉಸ್ತುವಾರಿ ಸಚಿವೆ ಹಾಗೂ ಕರಾವಳಿ ಭಾಗದ ಶಾಸಕರು ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಒಮ್ಮೆ ಪರಿಶೀಲಿಸಬೇಕು. ಜನಸಾಮಾನ್ಯರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಜನಾಂದೋಲನ ನಡೆಸಿ, ಕುಮಟಾ ಬಂದ್‌ಗೆ ಕರೆ ನೀಡುತ್ತೇವೆ. ಅಲ್ಲದೇ, ಸಂದರ್ಭಕ್ಕನುಸಾರವಾಗಿ ಧಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೆಡಿಎಸ್‌ ಮುಖಂಡ ಸೂರಜ್‌ ನಾಯ್ಕ ಸೋನಿ ಮಾತನಾಡಿ, ಜನಸಾಮಾನ್ಯರ ಹೋರಾಟವನ್ನು ಲೆಕ್ಕಿಸದೇ, ಐಆರ್‌ಬಿ ಕಂಪೆನಿಯವರು ಜಿಲ್ಲೆಯ 4 ಪಟ್ಟಣಗಳಲ್ಲಿ 2 ಬದಿಯ ರಸ್ತೆ ನಿರ್ಮಾಣ ಮಾಡದೇ, ಟೋಲ್‌ ವಸೂಲಿ ಪ್ರಾರಂಭಿಸಿದ್ದಾರೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ, ತಕ್ಷಣ ಟೋಲ್‌ ಪಡೆಯುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್‌ ಮುಖಂಡ ರವಿಕುಮಾರ ಶೆಟ್ಟಿ ಮಾತನಾಡಿ, ಐಆರ್‌ಬಿ ಕಂಪೆನಿ ಅವೈಜ್ಞಾನಿಕ ಕಾಮಗಾರಿ ನಡೆಸಿ ಟೋಲ್‌ ಶುಲ್ಕ ವಸೂಲಿಗೆ ಮುಂದಾಗಿರುವುದು ಖಂಡನೀಯ ಎಂದರು.

ಕಾನೂನು ಹೋರಾಟಕ್ಕೆ ಸಿದ್ಧತೆ: ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಐಆರ್‌ಬಿ ಕಂಪೆನಿಯವರು ಜಿಲ್ಲೆಯ ಸಂಪನ್ಮೂಲಗಳನ್ನು ಬಳಸಿಕೊಂಡು ಹೆದ್ದಾರಿ ನಿರ್ಮಿಸಿದ್ದಾರೆ. ಸ್ಥಳೀಯ ನೋಂದಣಿ ವಾಹಗಳಿಂದ ಶುಲ್ಕ ಪಡೆದರೆ, ಕಾನೂನು ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಉತ್ತರ ನೀಡದ ಐಆರ್‌ಬಿ ಅಧಿ ಕಾರಿ: ಶೇ.75 ರಷ್ಟು ಕಾಮಗಾರಿ ಮುಗಿದಿದೆ ಎಂದು ಅಧಿಕಾರಿಗಳು ಲಿಖೀತ ರೂಪದಲ್ಲಿ ತಿಳಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಾಗ, ಕಾರವಾರ ಡಿವೈಎಸ್‌ಪಿಅರವಿಂದ ಕಲಗುಜ್ಜಿ ಸಮಾಧಾನಗೊಳಿಸಲು ಪ್ರಯತ್ನಿಸಿದರೂ, ಬಗ್ಗದ ಪ್ರತಿಭಟನಾ ನಿರತರು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿ, ಮಾಹಿತಿ ನೀಡಲು ಒತ್ತಾಯಿಸಿದರು.

Advertisement

ನಂತರ ಸ್ಥಳಕ್ಕಾಗಮಿಸಿದ ಐಆರ್‌ಬಿ ಕಂಪೆನಿ ಅಧಿಕಾರಿ, ಕೇಂದ್ರ ಸರ್ಕಾರದ ಆದೇಶದಂತೆ ಟೋಲ್‌ ಪಡೆಯಲು ಪ್ರಾರಂಭಿಸಿದ್ದೇವೆ. ಮಂಗಳೂರಿ ನಿಂದ ಕಾರವಾರದವರೆಗೆ ಶೇ.75 ರಷ್ಟು ಕಾಮಗಾರಿ ಮುಗಿದಿದೆ ಎಂದಾಗ ಆಕ್ರೋಶಗೊಂಡ ಪ್ರತಿಭಟನಕಾರರು ಟೋಲ್‌ ಪ್ಲಾಜಾಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ತಡೆದು, ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ಭಟ್ಕಳ ಎಎಸ್‌ಪಿ ಗೌತಮ ಕೆ.ಸಿ ಮಾರ್ಗದರ್ಶನದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ ಏರ್ಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next