ದೊಡ್ಡಬಳ್ಳಾಪುರ: ಅಡುಗೆ ಅನಿಲದ ಸಿಲಿಂಡರ್ ಬೆಲೆ ಏರಿಕೆ ಖಂಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಸಿಪಿಐಎಂ ಹಾಗೂ ಪ್ರಜಾ ವಿಮೋಚನಾ ಸಮಿತಿ ವತಿಯಿಂದ ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಆರ್. ಚಂದ್ರತೇಜಸ್ವಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್ ಜನ ಸಾಮಾನ್ಯರ ವಿರೋಧಿಯಾಗಿವೆ. ಇದರ ಪರಿಣಾಮವೇ ಅಡುಗೆ ಅನಿಲದ ಸಿಲಿಂಡರ್ ಬೆಲೆ ಏರಿಕೆ. ದಿನ ನಿತ್ಯ ಬಳಸುವ ಎಲ್ಲಾ ರೀತಿಯ ಅಗತ್ಯ ವಸ್ತುಗಳು ದುಬಾರಿಯಾಗುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಲು ಜನಸಾಮಾನ್ಯರು ಜಾಗೃತರಾಗಬೇಕು ಎಂದು ಹೇಳಿದರು.
ಯಾರ ಖಾತೆಗೂ ಸಬ್ಸಿಡಿ ಹಣ ಜಮಾ ಆಗಿಲ್ಲ: ಅಡುಗೆ ಅನಿಲದ ಸಿಲಿಂಡರ್ ಬಳಸುವ ಗ್ರಾಹಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಸಬ್ಸಿಡಿ ಹಣ ಪಾವತಿ ಮಾಡುವ ನಾಟಕಮಾಡಿದ್ದ ಕೇಂದ್ರ ಬಿಜೆಪಿ ಸರ್ಕಾರ, ಈಗ ಸುಳ್ಳು ನೆಪ ಹೇಳುವ ಮೂಲಕ ಯಾವ ಗ್ರಾಹಕರ ಬ್ಯಾಂಕ್ ಖಾತೆಗಳಿಗೂ ಸಹಾಯಧನದ ಹಣ ಜಮಾ ಮಾಡುತ್ತಿಲ್ಲ. ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಮೀಣ ಭಾಗದ ಗ್ರಾಹಕರು ಅನಿ ವಾರ್ಯವಾಗಿ ಮತ್ತೆ ಸೌದೆ ಬಳಕೆಯತ್ತ ಮುಖ ಮಾಡಿದ್ದಾರೆ ಎಂದರು.
ಪ್ರಜಾ ವಿಮೋಚನ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ಗೂಳ್ಯ ಹನುಮಣ್ಣ ಮಾತ ನಾಡಿ, ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಸೇರಿದಂತೆ ಎಲ್ಲಾ ಪದಾರ್ಥಗಳ ಬೆಲೆಗಳು ಏರಿದ್ದು, ಜನ ಸಾಮಾನ್ಯರು ಬದುಕುವುದೇ ಕಷ್ಟಕರವಾಗಿದೆ. ಸರ್ಕಾರಗಳು ಈ ಬಗ್ಗೆ ಗಮನ ಹರಿಸಿ, ಬೆಲೆ ಇಳಿಸಲು ಮುಂದಾಗಬೇಕಿದೆ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡರಾದ ರುದ್ರಾರಾಧ್ಯ, ಪಿ.ಎ.ವೆಂಕಟೇಶ್, ವಿಜಯಕುಮಾರ್, ಸಿ.ಎಚ್.ರಾಮಕೃಷ್ಣ, ಅಶ್ವತ್ಥ್, ಪಿವಿಸಿ ಜಿಲ್ಲಾ ಗೌರವ ಅಧ್ಯಕ್ಷರಾದ ಮುನಿದಾಸಪ್ಪ, ತಾಲೂಕು ಅಧ್ಯಕ್ಷರಾದ ರಾಜೇಖರ್, ನಗರ ಅಧ್ಯಕ್ಷರಾದ ರಫೀಕ್, ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ ಇತರರಿದ್ದರು.