ಪಾಂಡವಪುರ: ಪೊಲೀಸರ ಎಚ್ಚರಿಕೆ ನಡುವೆಯೂ ಗಣಿಗಾರಿಕೆ ಪ್ರದೇಶದ ಸಮೀಪ ಪ್ರತಿಭಟನೆ ನಡೆಸುತ್ತಿದ್ದ ತಾಲೂಕಿನ ಕನಗನಮರಡಿ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿ ಕರೆದೊಯ್ದರು.
ಗ್ರಾಮದ ಹೊರವಲಯದಲ್ಲಿ ಅಶೋಕ್ ಪಾಟೀಲ್ ಒಡೆತನದಲ್ಲಿ ನಡೆಯುತ್ತಿರುವ ಗಣಿಗಾರಿಕೆಯನ್ನು ಶಾಶ್ವತವಾಗಿ ಸ್ಥಗಿತಗೊಳಿಸುವ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂಬ ನಿಲುವಿಗೆ ಬಂದಿರುವ ಪ್ರತಿಭಟನಾಕಾರರು ಮಳೆಯಲ್ಲೇ ಪ್ರತಿಭಟನೆ ಮುಂದುವರಿಸಿದ್ದರು.
ಶ್ರೀರಂಗಪಟ್ಟಣಕ್ಕೆ ಸ್ಥಳಾಂತರ: ಗ್ರಾಮದಸುಮಾರು 80ಕ್ಕೂ ಹೆಚ್ಚು ಪ್ರತಿಭಟನಾಕಾರರು ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು, 30ಕ್ಕೂಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಶ್ರೀರಂಗ ಪಟ್ಟಣಕ್ಕೆ ಸ್ಥಳಾಂತರಿಸಿದರು.
ಪ್ರತಿಭಟನೆಗೆ ಹಕ್ಕಿಲ್ಲ: ಈ ಹಿಂದೆ ನೂರಕ್ಕೂ ಹೆಚ್ಚಿನ ಪ್ರತಿಭಟನಾಕಾರರನ್ನು ಬಂಧಿಸಿ ಬಿಡುಗಡೆಗೊಳಿಸಿದ್ದಪೊಲೀಸರು, ಪ್ರತಿಭಟನಾಕಾರರು ಗಣಿಗಾರಿಕೆಪ್ರದೇಶದಲ್ಲಿ ಪ್ರತಿಭಟನೆಗಾಗಿ ಹಾಕಿದ್ದ ಶಾಮಿಯಾನ ತೆರವುಗೊಳಿಸಿದ್ದರು. ಪೊಲೀಸರ ಎಚ್ಚರಿಕೆಗೆಬಗ್ಗದ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದ್ದರು. ಗಣಿಗಾರಿಕೆ ಪ್ರದೇಶದಲ್ಲಿ ಪ್ರತಿಭಟನೆ ಮಾಡಲು ನಿಮಗೆ ಹಕ್ಕಿಲ್ಲ. ಹೀಗಾಗಿ ಬಂಧಿಸುತ್ತಿರುವುದಾಗಿ ಕಾರಣ ನೀಡಿರುವ ಪೊಲೀಸರ ವರ್ತನೆಯನ್ನು ಪ್ರತಿಭಟನಾಕಾರರು ಖಂಡಿಸಿದರು.
ಕೆರೆ ನೀರು ಕಲುಷಿತ: ಕಲ್ಲು ಗಣಿಗಾರಿಕೆ ಹಾಗೂ ಸ್ಟೋನ್ ಕ್ರಷಿಂಗ್‌ನಿಂದ ಸಮೀಪದ ವಿಶ್ವೇಶ್ವರಯ್ಯನಾಲಾ ಅಕ್ವಡೆಕ್, ಹುಲಿಕೆರೆ ನಾಲಾ ಸುರಂಗಮಾರ್ಗ ಹಾನಿಗೊಳಗಾಗುತ್ತದೆ. ಇದರಿಂದ 1.75 ಲಕ್ಷ ಎಕರೆ ರೈತರ ಬದುಕು ಸಂಕಷ್ಟಕ್ಕೀಡಾಗಲಿದೆ.ಅಲ್ಲದೇ, ಗ್ರಾಮಗಳ ಮನೆಗಳು ಮತ್ತು ದೇವಸ್ಥಾನಗಳ ಗೋಡೆಗಳು ಬಿರುಕು ಬಿಡುತ್ತಿವೆ. ಕ್ರಷರ್‌ದೂಳು ಸುತ್ತಲಿನ ಜಮೀನಿಗೆ ಆವರಿಸಿ ರೈತರು ವ್ಯವಸಾಯ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಕೆರೆಕಟ್ಟೆಗಳ ನೀರು ಕಲುಷಿತಗೊಳ್ಳುತ್ತಿದೆ. ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಪ್ರತಿಭಟನಾಕಾರರ ಧಿಕ್ಕಾರ: ಗಣಿಗಾರಿಕೆಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದರೂ, ಅಧಿಕಾರಿಗಳು ಮಾತ್ರ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಜಿಲ್ಲಾ,ತಾಲೂಕು ಮಟ್ಟದ ಅಧಿಕಾರಿಗಳು ಗಣಿಮಾಲಿಕ ಅಶೋಕ್‌ಗೌಡ ಅವರ ಪರವಾದ ಒಲುವು ಹೊಂದಿದ್ದಾರೆ. ಏನೇ ಆದರೂ ಗಣಿಗಾರಿಕೆ ನಿಲ್ಲುವ ತನಕಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಅಲ್ಲದೇ, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಈ ಸಂದರ್ಭದಲ್ಲಿ ಕನಗನಮರಡಿ ಗ್ರಾಮಪಂಚಾಯ್ತಿ ಅಧ್ಯಕ್ಷ ಸ್ವಾಮಿಗೌಡ, ಕೃಷ್ಣಮೂರ್ತಿ, ನಿಂಗೇಗೌಡ, ಸಿ.ಕುಮಾರ, ರಾಜು, ಚಿಕ್ಕಣ್ಣ, ಗುಣ, ಸುಜೇಂದ್ರ, ಬೋರೇಗೌಡ, ಉಮೇಶ್, ನಂದೀಶ್ ಮತ್ತಿತರರನ್ನು ಪೊಲೀಸರು ಬಂಧಿಸಿದರು.