ಚನ್ನರಾಯಪಟ್ಟಣ: ಎಪಿಎಂಸಿ, ಭೂ ಸುಧಾರಣೆ ಮತ್ತು ಕಾರ್ಮಿಕ ವಿರೋಧಿ ತಿದ್ದುಪಡಿ ಕಾಯ್ದೆ ಜಾರಿ ಖಂಡಿಸಿ ತಾಲೂಕು ರೈತ ಸಂಘ ಮತ್ತು ಹಸಿರುಸೇನೆಕಾರ್ಯಕರ್ತರು ಕೆ.ಆರ್. ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಮಾಡಿದರು.
ಹೋರಾಟದಲ್ಲಿ ಪಾಲ್ಗೊಂಡಿದ್ದ ಶಾಸಕ ಬಾಲಕೃಷ್ಣ ಮಾತನಾಡಿ, ಕಾರ್ಪೊರೇಟ್ ಸಂಸ್ಥೆಗೆ ಅನುಕೂಲ ಮಾಡಿಕೊಡಲು, ಅಕ್ರಮ ಹಣ ಹೊಂದಿದ್ದವರು ಕೃಷಿ ಭೂಮಿ ಖರೀದಿ ಮಾಡಲು ಸಹಾಯ ಮಾಡಲು ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ನೀಡದೆ ಸುಗ್ರೀವಾಜ್ಞೆ ತರುತ್ತಿರುವುದು ಸಮಂಜಸವಲ್ಲ ಎಂದು ಹೇಳಿದರು.
ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ಹಲವು ಮಂದಿ ವರ್ತಕರು ಬೀದಿ ಪಾಲಾಗುವುದಲ್ಲದೆ, ರೈತರ ಕೃಷಿ ಉತ್ಪನ್ನ ಖರೀದಿಗೆ ಸಾಕಷ್ಟು ಮಂದಿ ದಲ್ಲಾಳಿಗಳು ಮುಗಿ ಬೀಳಲಿದ್ದಾರೆ. ಎಪಿಎಂಸಿ ಮೂಲಕ ರೈತರು ವ್ಯವಹಾರ ಮಾಡುವುದರಿಂದ ತೂಕ ಹಾಗೂ ಬೆಲೆಯಲ್ಲಿ ಮೋಸ ಆಗುವುದನ್ನು ತಡೆಯ ಬಹುದು. ಈ ಬಗ್ಗೆ ಅಲೋಚನೆ ಮಾಡದೆ ಪ್ರಧಾನಿ ಮೋದಿ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ ತಿದ್ದುಪಡಿ ಮಾಡುತ್ತಿದ್ದಾರೆ ಎಂದು ಆಪಾದನೆ ಮಾಡಿದರು.
ವಿರೋಧ ಪಕ್ಷದ ಸ್ಥಾನದಲ್ಲಿ ಇದ್ದೇವೆ ಎಂದು ನಾವು ಇದನ್ನು ವಿರೋಧಿಸುತ್ತಿಲ್ಲ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು, ರೈತರಸಭೆಮಾಡಬೇಕು,ಮುಖಂಡರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಏಕಾಏಕಿ ತಮಗೆ ಸರಿ ಎನಿಸಿದನ್ನುಜಾರಿಗೆ ತರುವುದರಲ್ಲಿ ಅರ್ಥವಿಲ್ಲ ಎಂದರು.
ಜಿಪಂ ಸದಸ್ಯ ಸಿ.ಎನ್.ಪುಟ್ಟಸ್ವಾಮಿಗೌಡ, ಪುರಸಭೆ ಸದಸ್ಯ ಪ್ರಕಾಶ್, ರೈತ ಸಂಘದ ತಾಲೂಕು ಅಧ್ಯಕ್ಷ ಸಿ.ಜೆ.ರವಿ, ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ, ಶ್ರವಣಬೆಳಗೊಳ ಹೋಬಳಿ ಅಧ್ಯಕ್ಷ ಮಂಜು, ಸಂಚಾಲಕ ಕೃಷ್ಣೇಗೌಡ, ದಂಡಿಗನಹಳ್ಳಿ ಹೋಬಳಿ ಸಂಚಾಲಕ ತಮ್ಮಯ್ಯ ಉಪಸ್ಥಿತರಿದ್ದರು.