Advertisement

ವಿದ್ಯಾಗಮ ಯೋಜನೆ ನಿಲ್ಲಿಸದಿದ್ದರೆ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ: HDK ಎಚ್ಚರಿಕೆ

01:33 PM Oct 10, 2020 | keerthan |

ಬೆಂಗಳೂರು: ವಿದ್ಯಾಗಮ ಯೋಜನೆ ಆರಂಭವಾದ ನಂತರ ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್-19 ಪಾಸಿಟಿವ್- ಸಾವು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಯೋಜನೆಯನ್ನು ಸ್ಥಗಿತ ಮಾಡಲು ಸರ್ಕಾರದ ವಿರುದ್ಧ ಒತ್ತಡ ಹೆಚ್ಚುತ್ತಿದೆ. ಈ ಮಧ್ಯೆ ಸರ್ಕಾರಕ್ಕೆ ನೇರ ಎಚ್ಚರಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಈ ಯೋಜನೆಯನ್ನು ಸೋಮವಾರದ ಒಳಗೆ ನಿಲ್ಲಿಸದಿದ್ದರೆ ಮಂಗಳವಾರದಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಹೇಳಿದ್ದಾರೆ.

Advertisement

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೋವಿಡ್ ರಣಕೇಕೆ ಹಾಕುತ್ತಿರುವ ಸಂದರ್ಭದಲ್ಲಿ ವಿದ್ಯಾಗಮ ಶಿಕ್ಷಣದ ಹೆಸರಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಾವಿನ ಕಂದಕಕ್ಕೆ ನೂಕುತ್ತಿರುವ ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ? ಸರ್ಕಾರಕ್ಕೆ ಕನಿಷ್ಠ ಪರಿಜ್ಞಾನ ಬೇಡವೇ? ಎಂದು ಕಿಡಿಕಾರಿದ್ದಾರೆ.

ಮಕ್ಕಳು ಮತ್ತು ಶಿಕ್ಷಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ರಾಜ್ಯಸರ್ಕಾರ ಸೋಮವಾರದೊಳಗೆ ವಿದ್ಯಾಗಮ ಶಿಕ್ಷಣದ ಯಡವಟ್ಟನ್ನು ನಿಲ್ಲಿಸದಿದ್ದರೆ ವಿಧಾನಸೌಧ ಇಲ್ಲವೇ ಸ್ವಾತಂತ್ರ್ಯ ಉದ್ಯಾನದ ಬಳಿ ಅಹೋರಾತ್ರಿ ಧರಣಿ ಕೂರುವುದಾಗಿ ಈ ಮೂಲಕ ಎಚ್ಚರಿಕೆ ನೀಡುತ್ತಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ:ಸಾಂತ್ವನ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು: ಕಿಡಿಕಾರಿದ ಕುಮಾರಸ್ವಾಮಿ

ವೇತನ ಹಾಗೂ ಸೌಲಭ್ಯಗಳ ಕಡಿತದ ಬೆದರಿಕೆ ಒಡ್ಡಿ ಸಾವಿನ ದವಡೆಗೆ ನೂಕಿದ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಆ ಕುಟುಂಬದ ಅರ್ಹ ಸದಸ್ಯರಿಗೆ ಉದ್ಯೋಗ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

Advertisement

ಮಕ್ಕಳಿಗೆ ಶಿಕ್ಷಣ ಕೊಡುವ ಸೋಗಿನಲ್ಲಿ ಶಿಕ್ಷಣ ಸಚಿವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ನೀಡುತ್ತಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೀವಕ್ಕೆ ಕುತ್ತು ತರುತ್ತಿರುವುದು ಖಂಡನೀಯ ಹಾಗೂ ಅಮಾನವೀಯ. ಈ ವರ್ಷ ಶಾಲೆ ಆರಂಭಿಸದಿದ್ದರೆ ದೇಶ ಮುಳುಗಿ ಹೋದೀತೆ? ಇಂತಹದೊಂದು ಹುಚ್ಚಾಟ ಸರ್ಕಾರಕ್ಕೆ ಬೇಕೆ? ಇದೊಂದು ನಾಗರಿಕ ಸರ್ಕಾರವೇ ಎಂದು ಎಚ್ ಡಿಕೆ ಖಾರವಾಗಿ ಸರ್ಕಾರವನ್ನು ಕೇಳಿದ್ದಾರೆ.

ಕೋವಿಡ್ ನಿಯಂತ್ರಿಸುವಲ್ಲಿ ವಿಫಲವಾಗಿರುವ ಸರ್ಕಾರ ಕನಿಷ್ಠ ಆಕ್ಸಿಜನ್ ಒದಗಿಸಲು ಪರದಾಡುತ್ತಿದೆ. ಜನಪ್ರತಿನಿಧಿ ಇರಲಿ, ಸಾಮಾನ್ಯ ಪ್ರಜೆ ಇರಲಿ, ಜೀವ ರಕ್ಷಣೆ ಮಾಡಬೇಕಾದದ್ದು ಸರ್ಕಾರದ ಮೊದಲ ಆದ್ಯತೆ ಮತ್ತು ಕರ್ತವ್ಯ. ಜೀವ ಉಳಿದರೆ ತಾನೇ ಬದುಕು? ನನ್ನ ಜೀವ ಹೋದರೂ ಪರವಾಗಿಲ್ಲ. ಮಂಗಳವಾರ ದಿಂದ ಸರ್ಕಾರದ ಅನಾಗರಿಕ, ನಿರ್ಲಜ್ಜ ನೀತಿ, ನಿರ್ಧಾರದ ವಿರುದ್ಧ ಅಹೋರಾತ್ರಿ ಧರಣಿ ಆರಂಭಿಸುತ್ತೇನೆ ಎಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next