Advertisement

ಶಾಸಕ ಎಂ.ಪಿ. ರೇಣುಕಾಚಾರ್ಯ ವಿರುದ್ದ ನಾಳೆ ಪ್ರತಿಭಟನೆ

05:26 PM Apr 05, 2022 | Team Udayavani |

ದಾವಣಗೆರೆ: ಪರಿಶಿಷ್ಟ ಜಾತಿಯ ಹೆಸರಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತವರ ಕುಟುಂಬದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಏ. 6ರಂದು ಹೊನ್ನಾಳಿಯಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಹೊನ್ನಾಳಿ ತಾಲೂಕು ಸಂಚಾಲಕ ಡಾ| ಈಶ್ವರ ನಾಯ್ಕ ತಿಳಿಸಿದರು.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಬೆಳಗ್ಗೆ 10ಕ್ಕೆ ಹೊನ್ನಾಳಿಯ ಟಿ.ಬಿ. ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿ ಮೂಲಕ ರಾಜ್ಯಪಾಲರು, ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ನಮಗೆ ಹಿಂದಿನಿಂದಲೂ ಪರಿಚಯಸ್ಥರು. ಕುಂದೂರು ಗ್ರಾಮದವರಾದ ಅವರು ವೀರಶೈವ-ಲಿಂಗಾಯತರು. ಈಗ ಏಕಾಏಕಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡದವರಲ್ಲಿ ಆತಂಕ ಮೂಡಿದೆ. ವೀರಶೈವ-ಲಿಂಗಾಯತರ ಬಗ್ಗೆ ಅಪಾರ ಗೌರವ ಇದೆ. ಅವರನ್ನು ಪೂಜನೀಯ ಸ್ಥಾನದಲ್ಲಿ ನೋಡುತ್ತಾರೆ. ಅಂತಹವರು ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ. ಪರಿಶಿಷ್ಟ ಜಾತಿಯವರೇ ಅಲ್ಲದಿದ್ದರೂ ಯಾವ ಉದ್ದೇಶಕ್ಕಾಗಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿರುವ ಎಂ.ಪಿ. ರೇಣುಕಾಚಾರ್ಯ ಮತ್ತವರ ಕುಟುಂಬದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಚಿನ್ನಸಮುದ್ರ ಶೇಖರ ನಾಯ್ಕ ಮಾತನಾಡಿ, ಸ್ವತಃ ರೇಣುಕಾಚಾರ್ಯ ಅವರೇ ಸದನದಲ್ಲಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದಿರುವುದು ನಿಜ. ಆದರೆ ಯಾವುದೇ ಸೌಲಭ್ಯ ಪಡೆದಿಲ್ಲ ಎನ್ನುವ ಮೂಲಕ ತಾವು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ತಕ್ಷಣ ಅವರನ್ನು ಬಂಧಿಸುವ ಕೆಲಸ ಆಗಬೇಕು. ಆದರೆ ಈವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದಿರುವುದನ್ನು ನೋಡಿದರೆ ಸರ್ಕಾರ ಯಾರ ಪರ ಇದೆ ಎಂಬುದು ಗೊತ್ತಾಗುತ್ತದೆ ಎಂದು ದೂರಿದರು.

ಬಿಜೆಪಿ ಸರ್ಕಾರಕ್ಕೆ ನಿಜವಾಗಿಯೂ ಪರಿಶಿಷ್ಟ ಜಾತಿ, ಪಂಗಡದವರ ಬಗ್ಗೆ ಕಾಳಜಿ ಇದ್ದಲ್ಲಿ ಬೇಡಜಂಗಮ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.

Advertisement

ಜಿಪಂ ಮಾಜಿ ಅಧ್ಯಕ್ಷ ಆರ್‌. ನಾಗಪ್ಪ, ಡಿ. ಕತ್ತಲಗೆರೆ ತಿಪ್ಪಣ್ಣ, ಎಸ್‌.ಜಿ. ಸೋಮಶೇಖರ್‌, ಸುನೀಲ್‌ ಪಾಮೇನಹಳ್ಳಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next