Advertisement

ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಪ್ರತಿಭಟನಾ ಧರಣಿ

02:42 PM Oct 25, 2019 | Suhan S |

ಕುಷ್ಟಗಿ: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಪ್ರೊ| ಎಂ.ಡಿ. ನಂಜುಂಡಸ್ವಾಮಿ) ನೇತೃತ್ವದಲ್ಲಿ ರೈತರು ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

Advertisement

ಕರ್ನಾಟಕ ರಾಜ್ಯದ ರೈತ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಬೆಳವಣಕಿ ನೇತೃತ್ವದಲ್ಲಿ ರೈತರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋ ಧಿ ನೀತಿಯನ್ನು ಖಂಡಿಸಿದರು. ನಂತರ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಧರಣಿ ನಿರತರಾದ ರೈತರು, ತಹಶೀಲ್ದಾರ್‌ ಆಗಮಿಸುವವರೆಗೂ ಮೇಲೇಳುವುದಿಲ್ಲ ಎಂದು ಪಟ್ಟುಹಿಡಿದರು.

ತಹಶೀಲ್ದಾರ್‌ ಎಂ. ಸಿದ್ದೇಶ ಅವರು ಆಗಮನ ವಿಳಂಬವಾಗುತ್ತಿದ್ದಂತೆ ತಾಳ್ಮೆ ಕಳೆದುಕೊಂಡ ರೈತರು, ಕಚೇರಿಗೆ ಮುಖ್ಯದ್ವಾರ ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್‌ ಬರುತ್ತಿದ್ದಂತೆ ತರಾಟೆಗೆ ತೆಗೆದುಕೊಂಡರಲ್ಲದೇ ರೈತರ ಬೇಡಿಕೆಗಳನ್ನು ಈಡೇರಿಸಲು ತುರ್ತು ಕ್ರಮಕ್ಕೆ ಒತ್ತಾಯಿಸಿದರು.

ಅಧ್ಯಕ್ಷ ನಿಂಗಪ್ಪ ಬೆಳವಣಕಿ ಮಾತನಾಡಿ, ದಕ್ಷಿಣ ಕೋರಿಯಾ, ಅಸ್ಟ್ರೇಲಿಯಾ, ನ್ಯೂಜಿಲೆಂಡ್‌ ಸೇರಿದಂತೆ 15 ದೇಶಗಳೊಂದಿಗೆ ಭಾರತ ಸರ್ಕಾರ ಆರ್‌ಸಿಇಪಿ ಒಪ್ಪಂದಕ್ಕೆ ಸಿದ್ಧತೆ ನಡೆಸಿದೆ. ಈ ಒಪ್ಪಂದ ನಮ್ಮ ಆಹಾರ, ಕೃಷಿ ಕ್ಷೇತ್ರಕ್ಕೆ ಕಂಠಕವಾಗಲಿದೆ. ಈ ಒಪ್ಪಂದಕ್ಕೆ ಭಾರತ ಸಹಿ ಹಾಕಿದರೆ ಕೃಷಿ ಕ್ಷೇತ್ರ ನಾಶವಾಗುವುದಲ್ಲದೇ ರೈತರ ಆತ್ಮಹತ್ಯೆ ಹೆಚ್ಚಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಒಪ್ಪಂದದ ಹಿನ್ನೆಲೆಯಲ್ಲಿ ಒಪ್ಪಂದ ಮಾಡಿಕೊಂಡ ದೇಶಗಳು ತಮ್ಮ ಹೆಚ್ಚುವರಿ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲೆತ್ನಿಸುತ್ತಿದ್ದು, ಹೈನುಗಾರಿಕೆಗೆ ಹಿನ್ನಡೆಯಾಗಲಿದೆ. ಬೀಜ ಕಂಪನಿಗಳು ಹೆಚ್ಚಿನ ಅಧಿಕಾರವನ್ನು ಪಡೆಯುವ ಸಾಧ್ಯತೆಗಳಿದ್ದು, ಸುಪರ್‌ ಮಾರ್ಕೆಟ್‌, ದೊಡ್ಡ ಕಂಪನಿ ನೇರ ಚಿಲ್ಲರೆ ವ್ಯಾಪಾರವು ಸ್ಥಳೀಯ ಮಾರುಕಟ್ಟೆಗಳನ್ನು ಇನ್ನಿಲ್ಲದಂತೆ ಮಾಡಲಿವೆ. ದೇಶಾದ್ಯಂತ ರೈತ ಸಂಘಟನೆಗಳು ಈ ಒಪ್ಪಂದಕ್ಕೆ ಸಹಿ ಹಾಕದಂತೆ ಪ್ರತಿಭಟನೆ ನಡೆಸಿ, ಮನವಿಯನ್ನು ತಹಶೀಲ್ದಾರ್‌ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು.

Advertisement

ಜೆಸ್ಕಾಂ ಮಾಲಗಿತ್ತಿ ಈರಣ್ಣ ಹುಲ್ಲೂರು ಅವರಿಗೆ 13,846 ರೂ., ಪರಸಪ್ಪ ಹಾದಿಮನಿ ಅವರಿಗೆ 11,360 ರೂ.ಗಳ ದಂಡ ವಿಧಿಸಿರುವುದನ್ನು ಖಂಡಿಸಿದ ನಿಂಗಪ್ಪ ಬೆಳವಣಿ, ಮುಗನೂರು ಟಿಸಿ ಅಳವಡಿಸಿಲ್ಲ, ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೃಷ್ಣಾ ಬಿಸ್ಕಿಂ ಯೋಜನೆ ಮೂರನೇ ಹಂತದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಬೇಕೆಂದು ಹಕ್ಕೊತ್ತಾಯ ಮಂಡಿಸಿದರು. ಜಿಲ್ಲಾ ಉಪಾಧ್ಯಕ್ಷ ಪರಶುರಾಮ್‌, ತಾಲೂಕು ಗೌರವಾಧ್ಯಕ್ಷ ಹನಮಪ್ಪ, ಯಂಕಪ್ಪ ನೇತೃತ್ವವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next