Advertisement

ರಾಜಣ್ಣ ವಿರುದ್ಧದ ಪ್ರತಿಭಟನೆ ಮುಂದೂಡಿಕೆ

04:02 PM Jun 10, 2019 | Suhan S |

ತುಮಕೂರು: ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ವಿರುದ್ಧ ಪರಮೇಶ್ವರ್‌ ಅಭಿಮಾನಿ ಬಳಗದಿಂದ ಜೂ.12ರಂದು ಹಮ್ಮಿಕೊಂಡಿದ್ದ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಿ.ಪಂ.ಸದಸ್ಯ ಕೆಂಚಮಾರಯ್ಯ ತಿಳಿಸಿದರು.

Advertisement

ಅವಕಾಶ ನಿರಾಕರಣೆ: ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸಿಎಂ ಘನತೆಗೆ ಗೌರವ ಕೊಡದೆ, ನನ್ನ ವಿರುದ್ಧ ಧಿಕ್ಕಾರ ಕೂಗಿ ಯಾರಾದರೂ ಪ್ರತಿಭಟಿಸಿದರೆ ಅವರ ನಾಲಿಗೆ ಸೀಳುವುದಾಗಿ ಹೇಳಿದ್ದಕ್ಕೆ ಪ್ರತಿಭಟನೆಗೆ ಮುಂದಾಗಿದ್ದೆವು. ಕಾನೂನು ತೊಡಕಿನಿಂದ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿದ್ದರಿಂದ ಪ್ರತಿಭಟನೆ ಮುಂದೂಡಲಾಗಿದೆ ಎಂದು ಹೇಳಿದರು.

ಹಿರಿಯರ ಸಲಹೆ: ಪ್ರತಿಭಟನೆಗೆ ಹತ್ತು ತಾಲೂಕುಗಳ ಮುಖಂಡರು ಉತ್ತಮ ಸ್ಪಂದನೆ ನೀಡಿದ್ದರು. ಮಾಜಿ ಶಾಸಕ ಕೆ.ಎನ್‌.ರಾಜಣ್ಣ ವಿಷಾದ ವ್ಯಕ್ತಪಡಿಸಿದ ನಂತರ ಪ್ರತಿಭಟನೆಗೂ ಮುನ್ನ ಚಿಂತಿಸುವುದು ಒಳ್ಳೆಯದು, ಆತುರದ ತೀರ್ಮಾನ ಬೇಡ ಎಂಬ ಸಲಹೆ ಹಿರಿಯರು ನೀಡಿದ್ದಾರೆ. ವಿಷಾದದ ಬಗ್ಗೆ ಜಾತ್ಯತೀತವಾಗಿ, ಪಕ್ಷಾತೀತವಾಗಿ ಬೆಂಬಲ ಸೂಚಿಸಿರುವವರೊಂದಿಗೆ ಚರ್ಚಿಸಿ ಪ್ರತಿಭಟನೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಚರ್ಚಿಸಿ ತೀರ್ಮಾನ: ಡಿಸಿಎಂ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಸರ್ವಾಧಿಕಾರಿ ಧೋರಣೆ ವಿರುದ್ಧ ಪಕ್ಷಾತೀತವಾಗಿ ಹೋರಾಟ ರೂಪಿಸಲಾಗಿತ್ತು. ಯಾವುದೇ ಜಾತಿ ಅಥವಾ ಪಕ್ಷದ ವಿರುದ್ಧ ಅಲ್ಲ. ಪ್ರತಿಭಟನೆ ನಿಲ್ಲಿಸುವಂತೆ ಪಕ್ಷದ ಯಾವ ಮುಖಂಡರೂ ನಮಗೆ ಸೂಚಿಸಿಲ್ಲ. ಯಾವುದೇ ಒತ್ತಡಕ್ಕೆ ಮಣಿದು ಪ್ರತಿಭಟನೆ ನಿಲ್ಲಿಸುವುದಿಲ್ಲ. ವಿಷಾದದ ಬಗ್ಗೆ ಚರ್ಚಿಸುವುದು ಅವಶ್ಯಕವಾಗಿರುವುದರಿಂದ ಮುಂದೂಡಲಾಗಿದೆ ಎಂದು ತಿಳಿಸಿದರು.

ವಿಷಾದ ವ್ಯಕ್ತಪಡಿಸಿರುವುದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇರಬಹುದು. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಕೆಂಚಮಾರಯ್ಯ ಉತ್ತರಿಸಿದರು.

Advertisement

ತಾಲೂಕು ಪ್ರವಾಸ: ಈ ವಿಚಾರದಲ್ಲಿ ದೊಡ್ಡವರು ರಾಜಿ ಸಂಧಾನ ಮಾಡಿಕೊಂಡರೂ ಒಪ್ಪಿಕೊಳ್ಳವುದಿಲ್ಲ, ಡಿಸಿಎಂಗೆ ಆಗಿರುವ ಅವಮಾನವನ್ನು ಸಮುದಾಯ ಮರೆಯುವುದಿಲ್ಲ. ಸಮುದಾಯದಲ್ಲಿ ಅರಿವು ಮೂಡಿಸಲು ಎಲ್ಲ ತಾಲೂಕುಗಳಲ್ಲಿಯೂ ಪ್ರವಾಸ ಮಾಡುತ್ತೇವೆ. ಎಲ್ಲರಲ್ಲೂ ವಿಶ್ವಾಸ ಮೂಡಿಸುತ್ತೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಘಟನೆಯಿಂದ ಮಲಗಿದ್ದ ಸಮುದಾಯದಲ್ಲಿ ಎಚ್ಚರಿಕೆ ಮೂಡಿದ್ದು, ಸಮುದಾಯದ ಜಾಗೃತವಾಗಿದೆ. ನಮ್ಮಲ್ಲಿನ ತಪ್ಪು ಅರಿತುಕೊಂಡಿದ್ದೇವೆ. ಮುಂದೆ ವ್ಯವಸ್ಥಿತವಾಗಿ ಪ್ರತಿಭಟನೆ ರೂಪಿಸುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಕೃಷ್ಣ, ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣಮೂರ್ತಿ, ಯಾದವ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಗೌಡ, ಮಾಜಿ ತುಮುಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್‌, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಮಾಜಿ ನಗರಸಭಾ ಸದಸ್ಯ ತರುಣೇಶ್‌, ಮುಖಂಡರಾದ ವಾಲೆಚಂದ್ರು, ಸೋಮಣ್ಣ, ಅತೀಕ್‌ ಅಹಮದ್‌, ಪುಟ್ಟರಾಜು, ನಿಂಗರಾಜು, ದಿನೇಶ್‌, ನರಸೀಯಪ್ಪ, ರೇವಣ್ಣ ಸಿದ್ದಪ್ಪ, ನಗರ ಪಾಲಿಕೆ ಸದಸ್ಯ ಮಹೇಶ್‌, ಗೋವಿಂದಗೌಡ ದೀಪು ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next