Advertisement

ರೈಲ್ವೆ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

07:05 PM Oct 02, 2020 | Suhan S |

ವಿಜಯಪುರ: ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದಲ್ಲಿ ರೈಲ್ವೆ ಖಾಸಗೀಕರಣಕ್ಕೆ ಮುಂದಾಗಿದ್ದು, ಕೂಡಲೇ ಇಂಥ ನಡೆಯಿಂದ ಹಿಂದೆ ಸರಿಯುವಂತೆ ಆಗ್ರಹಿಸಿ ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಆನ್‌ಲೈನ್‌ ಮೂಲಕ ಬೇಡಿಕೆ ಭಿತ್ತಿಪತ್ರ ಪ್ರದರ್ಶನ ನಡೆಸಲಾಯಿತು.

Advertisement

ಗುರುವಾರ ಆನ್‌ಲೈನ್‌ ಮೂಲಕ ರೈಲ್ವೆ ಖಾಸಗೀಕರಣ ವಿರೋಧಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆ ಪ್ರಮುಖರು, ಕೇಂದ್ರ ಬಿಜೆಪಿ ಸರ್ಕಾರ ಭಾರತೀಯ ರೈಲ್ವೆ ಸೇರಿದಂತೆ ಸಾರ್ವಜನಿಕಉದ್ದಿಮೆಗಳ ಖಾಸಗೀಕರಣ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿಯಂತಹ ಜನ ವಿರೋ ಧಿ- ಕಾರ್ಪೊರೇಟ್‌ ಪರ ಕ್ರಮ ವಿರೋಧಿ ಸಿ, ವಲಸೆ ಕಾರ್ಮಿಕರು ಹಾಗೂ ಸ್ಕೀಂ ಕಾರ್ಯಕರ್ತೆಯರು ಸೇರಿದಂತೆ ವಿವಿಧ ವಲಯಗಳ ದುಡಿಯುವ ಜನರ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿಎಐಯುಟಿಯುಸಿ ಅ.1ರಿಂದ 7ರ ವರೆಗೆ ಅಖೀಲ ಭಾರತ ಪ್ರತಿಭಟನಾ ಸಪ್ತಾಹ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಭಿತ್ತಿಪತ್ರದ ಮೂಲಕ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.

ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿಗೆ ಅಧಿಕಾರ ವಹಿಕೊಂಡ ನಂತರ ಕಾರ್ಮಿಕ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್‌ ಮಡಿಲಿಗೆ ಹಾಕಿ ಲಕ್ಷಾಂತರ ಉದ್ಯೋಗ ನಾಶ ಮಾಡಿದೆ. ದಿಢೀರ್‌ ಲಾಕ್‌ಡೌನ್‌ ಹೇರಿಕೆ ಪರಿಣಾಮ ಕಟ್ಟಡ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಬುದುಕು ಚೇತರಿಕೆ ಕಂಡಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರ ಕಾರ್ಪೊರೇಟ್‌ ಮನೆತನಗಳ ಒತ್ತಡಕ್ಕೆ ಮಣಿದು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆ

ಖಾಸಗೀಕರಣಗೊಳಿಸಿ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸಿದೆ ಎಂದು ವಾಗ್ಧಾಳಿ ನಡೆಸಿದರು. ಭಾರತೀಯ ರೈಲ್ವೆ ಖಾಸಗೀಕರಣಗೊಳ್ಳಲು ಬಿಡಬಾರದು, 109 ರೂಟ್‌ಗಳಲ್ಲಿ 151 ಖಾಸಗಿ ರೈಲುಗಳನ್ನು ಓಡಿಸುವ ಯೋಜನೆ ಕೈ ಬಿಡಬೇಕು, ಯಾವುದೇ ಕಾರಣಕ್ಕೂ ರೈಲ್ವೆ ಜಮೀನು,

ಕಾಲೋನಿಗಳು, ಆಸ್ಪತ್ರೆಗಳು, ವರ್ಕ್‌ಶಾಪ್‌, ಇತರೆ ರೈಲ್ವೆ ಸಂಸ್ಥೆ ಮುಚ್ಚುವ, ಮಾರಾಟ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ರೈಲ್ವೆ ಉತ್ಪಾದಕ 7 ಘಟಕಗಳನ್ನು ಕಾರ್ಪೊರೇಟ್‌ ಮನೆತನಗಳಿಗೆ ಮಾರುವುದನ್ನು ತಡೆಗಟ್ಟಬೇಕು. ಉದ್ಯೋಗ ಕಡಿತದ ಬದಲು ಖಾಲಿಯಿರುವ ಹುದ್ದೆ ಭರ್ತಿ ಮಾಡಬೇಕು,55 ವರ್ಷ ವಯಸ್ಸು ಅಥವಾ 30 ವರ್ಷಗಳ ಸೇವೆ ಹೆಸರಲ್ಲಿ ಯಾವುದೇ ನೌಕರರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ನಡೆಯಿಂದ ಸರ್ಕಾರ ಹಿಂದೆ ಸರಿಯಬೇಕು. ನಿವೃತ್ತ ಎಲ್ಲ ನೌಕರರಿಗೂ ಹಳೆ ಪಿಂಚಣಿ ಸ್ಕೀಂ ಅನುಸಾರ ಪಿಂಚಣಿ ನೀಡಬೇಕು, ರೈಲ್ವೆ ಪ್ರಯಾಣ ದರ ಮತ್ತು ಸರಕು ಸಾಗಾಣಿಕೆ ದರ ಏರಿಸಬಾರದು, ವಿವೇಕದೇವರಾಯ್‌ ಸಮಿತಿ ಶಿಫಾರಸು ರದ್ದುಗೊಳಿಸಬೇಕೆಂದು ಆಗ್ರಹಿಸಿದರು. ಈ ವೇಳೆ ಸಂಘಟನೆ ಜಿಲ್ಲಾಧ್ಯಕ್ಷ ಎಚ್‌.ಟಿ. ಮಲ್ಲಿಕಾರ್ಜುನ, ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಕಾರ್ಮಿಕರಾದ ಕಾಶಿಬಾಯಿ ಜನಗೊಂಡ, ಮಹಾದೇವಿ ಧರ್ಮಶೆಟ್ಟಿ, ಭಾರತಿ ದೇವಕತೆ, ಶಶಿಕಲಾ ಮ್ಯಾಗೇರಿ, ಲಕ್ಷ್ಮೀ ಲಕ್ಷಟ್ಟಿ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next