ದಾವಣಗೆರೆ: ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮ ಪಂಚಾಯತಿ ಕಾರ್ಯದರ್ಶಿ, ಚನ್ನಗಿರಿ ತಾಲೂಕಿನ ತಿಪ್ಪಗೊಂಡನಹಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೇಲಿನ ಹಲ್ಲೆ ಖಂಡಿಸಿ, ತಪ್ಪಿತಸ್ಥರ ಬಂಧಿಸುವಲ್ಲಿ ಪೊಲೀಸರು ನಿರ್ಲಕ್ಷತನ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾ ಪಂಚಾಯತ್ ಎದುರು ಪ್ರತಿಭಟಿಸಿದ್ದಾರೆ.
ತಿಪ್ಪಗೊಂಡನಹಳ್ಳಿ ಗ್ರಾಮದ ಶಂಕರಯ್ಯ ಎಂಬುವರು ಸರ್ಕಾರಿ ಜಾಗ ಒತ್ತುವರಿಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿರುವ ಕಾಂಪೌಂಡ್ ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿದ್ದು, ಕಾಂಪೌಂಡ್‌ಗೆ ಹೊಂದಿಕೊಂಡಂತೆ ವಿದ್ಯುತ್ ಕಂಬ, ಶಾಲೆ ಇವೆ.
ಕಾಂಪೌಂಡ್ ಬಿದ್ದಲ್ಲಿ ಅನಾಹುತ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅದರ ತೆರವಿಗೆ ಹೋಗಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎಚ್.ಪಿ. ಯಶವಂತ್ ಕುಮಾರ್ ಮೇಲೆ ಮೂರ್ತಯ್ಯ ಎಂಬಾತ ಹಲ್ಲೆ ನಡೆಸಿದರೂ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅದನ್ನು ತಡೆಯದೆ ವಿಡಿಯೋ ಚಿತೀಕರಣ ಮಾಡಿದ್ದಾರೆ.
ಸಂಬಂಧಿತ ಆರೋಪಿಯನ್ನು ಠಾಣೆಗೆ ಕರೆ ತಂದಿಲ್ಲ. ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಗಳೂರು ತಾಲೂಕಿನ ತೋರಣಗಟ್ಟೆಯಲ್ಲಿ ಫೆ. 22 ರಂದು ಸಂಭವಿಸಿದ ವಿದ್ಯುತ್ ಅವಘಡದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟ ಸಂದರ್ಭದಲ್ಲಿಸ್ಥಳಕ್ಕೆ ಭೇಟಿ ನೀಡಿದ್ದ ಗ್ರಾಮ ಪಂಚಾಯತಿ ಕಾರ್ಯದರ್ಶಿ ನಾಗಪ್ಪ ಮೇಲೆ ಕೆಲವು ಕಿಡಿಗೇಡಿಗಳು ಹಲ್ಲೆ ನಡೆಸಿದ್ದರು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರಿದರು. ಸಾರ್ವಜನಿಕ ಕೆಲಸ ಮಾಡುವ ಅಧಿಕಾರಿಗಳ ಮೇಲೆ ನಡೆಯುವ ಹಲ್ಲೆ ತಡೆದು, ಸೂಕ್ತ ರಕ್ಷಣೆ ನೀಡಬೇಕು. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಂ. ಸಂಗಮೇಶ್, ಎಸ್. ವಿವೇಕಾನಂದ, ಎಂ.ಆರ್. ಸಿದ್ದಪ್ಪ, ಐ.ಸಿ. ವಿದ್ಯಾವತಿ, ಪ್ರೇಮಾ, ಕೆ.ಎಸ್. ರಮೇಶ್, ಉಮೇಶ್, ಶ್ರೀನಿವಾಸ್, ದೇವೇಂದ್ರಪ್ಪಇತರರು ಇದ್ದರು.