ಸಾಗರ: ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನರ ಶೋಷಣೆಗೆ ಇಳಿದಿದ್ದು, ಜನ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಬುಧವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಕಡಿಮೆ ಇದೆ. ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಕೇಂದ್ರ ಸರ್ಕಾರದ ಅವೈಜ್ಞಾನಿಕ ಆರ್ಥಿಕ ನೀತಿಯಿಂದ ದರವನ್ನು ವಿಪರೀತ ಏರಿಸಿದೆ ಎಂದು ದೂರಿದರು.
ಇಂತಹ ಸರ್ಕಾರಗಳು ಹೆಚ್ಚು ಕಾಲ ದೇಶದಲ್ಲಿ ಆಡಳಿತ ಮಾಡಿದರೆ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರವನ್ನು ಬದಲಾಯಿಸಲು ಕಾಂಗ್ರೆಸ್ ಪಕ್ಷ ಹೋರಾಟದ ಮೂಲಕ ಸಜ್ಜಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಜನವಿರೋಧಿ ಕಾಯ್ದೆಯನ್ನು ಜಾರಿಗೆ ತರುತ್ತಿವೆ. ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಮಾರುಕಟ್ಟೆ ವ್ಯವಸ್ಥೆಯ ಹಲ್ಲು ಮುರಿಯುವ ಕೆಲಸ ಮಾಡುತ್ತಿದೆ. ಬಂಡವಾಳಶಾಹಿಗಳಿಗೆ ಅನುಕೂಲ ಮಾಡಲು ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಈ ಕಾಯ್ದೆ ತಿದ್ದುಪಡಿ ಮಾಡುವುದರಿಂದ ಭೂಸುಧಾರಣಾ ಕಾಯ್ದೆಯ ಆಶಯವೇ ಬುಡಮೇಲಾತ್ತದೆ ಎಂದು ದೂರಿದರು.
ಜನರು ಕೊರೊನಾದಿಂದ ತೀವ್ರ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ದರವನ್ನು ಕೇಂದ್ರ ಸರ್ಕಾರ ಪ್ರತಿದಿನ ಹೆಚ್ಚಿಸುತ್ತಿದೆ. ಕಳೆದ ಕೆಲವು ದಿನಗಳಿಂದ ಇವುಗಳ ಮೂಲ ಬೆಲೆಗಿಂತ ಶೇ. 400ರಷ್ಟು ದರ ಹೆಚ್ಚಳವಾಗಿದೆ. ಇದರಿಂದಾಗಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಲಿ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಐ.ಎನ್.ಸುರೇಶಬಾಬು ಮಾತನಾಡಿದರು. ತಾಪಂ ಅಧ್ಯಕ್ಷ ಬಿ.ಎಚ್. ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ತಸ್ರಿàಫ್, ಮಹಾಬಲ ಕೌತಿ, ತೀ.ನ.ಶ್ರೀನಿವಾಸ್, ಯಶವಂತ್ ಪಣಿ, ಅಶೋಕ ಬೇಳೂರು, ನಾಗರಾಜಸ್ವಾಮಿ ಪ್ರವೀಣ ಬಣಕಾರ್, ಗಣಪತಿ ಮಂಡಗಳಲೆ, ಎಲ್. ಚಂದ್ರಪ್ಪ, ಮಕೂºಲ್ ಅಹ್ಮದ್, ಎನ್.ಲಲಿತಮ್ಮ, ಉಷಾ ಎನ್., ಸರಸ್ವತಿ, ತುಕಾರಾಮ್ ಶಿರವಾಳ, ಮಧುಮಾಲತಿ, ವೀಣಾ ಪರಮೇಶ್ವರ್, ಮರಿಯಾ, ಅನ್ವರ್ ಭಾಷಾ ಇನ್ನಿತರರು ಹಾಜರಿದ್ದರು.