ಕೋಟ: 94ಸಿ ಮತ್ತು 94ಸಿ.ಸಿಯಲ್ಲಿ ಹಕ್ಕು ಪತ್ರಕ್ಕಾಗಿ ಅರ್ಜಿಸಲ್ಲಿಸಲು ಸೆ.12ರ ವರೆಗೆ ಅವಕಾಶವಿದ್ದು, ಅರ್ಜಿ ಸಲ್ಲಿಸುವ ಅವಧಿ ಮುಗಿಯುವ ಮೊದಲೇ ಕುಂದಾಪುರ ಭಾಗದ ಕೆಲವು ರಾಜಕೀಯ ನಾಯಕರು ಪಾದಯಾತ್ರೆ ಮಾಡಿ ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ ಸಂಗತಿ ಎಂದು ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಶುಕ್ರವಾರ ಮಂದಾರ್ತಿ ದುರ್ಗಾಪರಮೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕೋಟ ಹೋಬಳಿ ಮಟ್ಟದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಉಡುಪಿ ಜಿಲ್ಲೆಯಲ್ಲಿ 60ಸಾವಿರ ಕುಟುಂಬಕ್ಕೆ ಪಡಿತರ ಚೀಟಿ ವಿತರಿಸಿದೆ. ಇಂದು ಬಿ.ಪಿ.ಎಲ್.ಕಾರ್ಡ್ ಕೇವಲ ಪಡಿತರ ಪಡೆಯಲು ಸೀಮಿತವಾಗಿಲ್ಲ, ಆರೋಗ್ಯ ಯೋಜನೆ, ಭಾಗ್ಯಲಕ್ಷ್ಮೀ, ವಿದ್ಯುತ್ ಹೀಗೆ ಅನೇಕ ಸೌಲಭ್ಯಗಳಿಗೆ ಉಪಯೋಗವಾಗುತ್ತಿದೆ. ಹೀಗಾಗಿ ಹೆಚ್ಚಿನ ಷರತ್ತುಗಳನ್ನು ವಿಧಿಸದೆ ಬಿ.ಪಿ.ಎಲ್.ಕಾರ್ಡ್‌ಗಳನ್ನು ನೀಡಲಾಗುತ್ತಿದೆ.ರಾಜ್ಯ ಸರಕಾರ ರೈತರ ಕುರಿತು ಕಾಳಜಿಯನ್ನು ಸಾಲ ಮನ್ನಾ ಮಾಡುವುದರ ಮೂಲಕ ತೋರಿಸಿದೆ. ಅದೇ ರೀತಿ ಕೇಂದ್ರ ಸರಕಾರ ಕೂಡ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಜಿಲ್ಲಾಡಳಿತ ಹಾಗೂ ಜಿ.ಪಂ. ಆಶ್ರಯದಲ್ಲಿ ಉಡುಪಿ ಜಿಲ್ಲೆಯನ್ನು ತ್ಯಾಜ್ಯ ಮುಕ್ತ ಜಿಲ್ಲೆ ಮಾಡುವ ಸಂಕಲ್ಪ ಹೊಂದಿದ್ದು ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು.
ಈ ಸಂದರ್ಭ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು ಹಾಗೂ ಜನರ ಸಮಸ್ಯೆಯ ಕುರಿತು ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಲಾಯಿತು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಪ್ರದೀಪ್ ಕುಡೇìಕರ್, ಉಡುಪಿ ಜಿ.ಪಂ. ಮಾಜಿ ಸದಸ್ಯ ಶಂಕರ್ ಕುಂದರ್, ಬಿಲ್ಲಾಡಿ ಗ್ರಾ.ಪಂ. ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ವಡ್ಡರ್ಸೆ ಗ್ರಾ.ಪಂ. ಅಧ್ಯಕ್ಷೆ ಹೇಮಾ, ಹೆಗ್ಗುಂಜೆ ಗ್ರಾ.ಪಂ. ಅಧ್ಯಕ್ಷ ಗಣೇಶ್ ಶೆಟ್ಟಿ, ಆವರ್ಸೆ ಗ್ರಾ.ಪಂ. ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಉಪಸ್ಥಿತರಿದ್ದರು. ಕಾಡೂರು ಗ್ರಾ.ಪಂ. ಪಿ.ಡಿ.ಒ. ಮಹೇಶ್ ಕಾರ್ಯಕ್ರಮ ನಿರೂಪಿಸಿದರು.