Advertisement

ನಾಗೂರು-ಹೇರೂರು ರಸ್ತೆ ದುರಸ್ತಿಗೆ ಆಗ್ರಹಿಸಿ ಪ್ರತಿಭಟನೆ

01:00 AM Mar 07, 2019 | Team Udayavani |

ಉಪ್ಪುಂದ: ನನೆಗುದಿಗೆ ಬಿದ್ದಿರುವ ನಾಗೂರು- ಹೇರೂರು ರಸ್ತೆಯ ದುರಸ್ತಿ ಕಾರ್ಯವನ್ನು ತತ್‌ಕ್ಷಣ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿ ಸುತ್ತಲಿನ ಗ್ರಾಮಸ್ಥರು ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. 

Advertisement

ಹೇರೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ಮಾತನಾಡಿ, 5 ಕಿ.ಮೀ. ಉದ್ದದ ಈ ರಸ್ತೆಯಲ್ಲಿ ನಡೆದಾಡಲು ಅಸಾಧ್ಯವಾಗುವ ರೀತಿಯಲ್ಲಿ ಹೊಂಡಗುಂಡಿಗಳು ಉಂಟಾಗಿವೆ. ದುರಸ್ತಿಗೆ ಎರಡು ವರ್ಷಗಳಿಂದ ಜನ ಆಗ್ರಹಿಸುತ್ತಲೇ ಬಂದಿದ್ದಾರೆ. ಇಲ್ಲಿ ಅನುಮತಿ ಪಡೆದು ಓಡಾಡುತ್ತಿದ್ದ ಎರಡು ಬಸ್‌ಗಳು ಇದೇ ಕಾರಣಕ್ಕೆ ಓಡಾಟ ನಿಲ್ಲಿಸಿವೆ. ಸಂಜೆಯ ಬಳಿಕ ಇಲ್ಲಿ ಆಟೋಗಳು ಬರುವುದಿಲ್ಲ. ಇಡೀ ರಸ್ತೆಯಲ್ಲಿ ಧೂಳು ಏಳುತ್ತಿದೆ ಎಂದರು.

ಯಡಕಂಟ, ಉಪ್ರಳ್ಳಿ, ಮೇಕೋಡು, ಹೇರೂರು, ನೂಜಾಡಿ, ತಂಕಬೆಟ್ಟು, ಹಳಗೇರಿಯ 4,000 ಕುಟುಂಬಗಳು, ರಸ್ತೆಯ ಅಕ್ಕಪಕ್ಕ ಇರುವ 3 ಹಿರಿಯ ಪ್ರಾಥಮಿಕ, 2 ಕಿರಿಯ ಪ್ರಾಥಮಿಕ ಶಾಲೆ, 4 ಅಂಗನವಾಡಿಗಳ ಸುಮಾರು 300 ಮಕ್ಕಳು ಈ ರಸ್ತೆಯನ್ನು ಪ್ರತಿದಿನ ಬಳಸಬೇಕಾಗಿದೆ. ಇವುಗಳ ಜತೆಗೆ ರಸ್ತೆ ಬದಿಯ ಮನೆ, ಅಂಗಡಿಗಳು ಧೂಳಿನ ಸ್ನಾನ ಮಾಡುತ್ತಿವೆ. ಓಡಾಡುವವರು ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕಾಗಿದೆ. ರಸ್ತೆಯ ಸ್ಥಿತಿ ಸಹಿಸಲು ಅಸಾಧ್ಯ ಎನ್ನುವ ಮಟ್ಟ ತಲಪಿದೆ ಎಂದರು.

ಅಂತಿಮಗೊಳ್ಳದ ಟೆಂಡರ್‌
ವಿಧಾನಸಭಾ ಚುನಾವಣೆಯ ಮುನ್ನ ಅಂದಿನ ಶಾಸಕ ಕೆ. ಗೋಪಾಲ ಪೂಜಾರಿ ಅವರು ಈ ರಸ್ತೆಗೆ 3 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿಸಿದ್ದರು. ಚುನಾವಣೆಯಲ್ಲಿ ಅವರು ಸೋತು, ಬಿ. ಎಂ. ಸುಕುಮಾರ ಶೆಟ್ಟಿ ಶಾಸಕರಾದರು. ಸರ್ಕಾರವೂ ಬದಲಾಯಿತು. ರಸ್ತೆಯನ್ನು ಎರಡು ಭಾಗಗಳಲ್ಲಿ ದುರಸ್ತಿ ಮಾಡಲು ಒಟ್ಟು 2. 4 ಕೋಟಿ ರೂ ಮೊತ್ತದ ಅಂದಾಜುಪಟ್ಟಿ ತಯಾರಿಸಿ, ಟೆಂಡರ್‌ ಕರೆಯಲಾಯಿತು. ಆದರೆ ಯಾವುದೋ ಕಾರಣದಿಂದ ಟೆಂಡರ್‌ ಅಂತಿಮಗೊಂಡಿಲ್ಲ ಎನ್ನಲಾಗುತ್ತಿದೆ. ದುರಸ್ತಿ ಕಾರ್ಯ ತತ್‌ಕ್ಷಣ ಆರಂಭವಾಗದೆ ಲೋಕಸಭಾ ಚುನಾವಣೆಯ ನೀತಿಸಂಹಿತೆ ಜಾರಿಯಾದರೆ ದುರಸ್ತಿ ಕಾರ್ಯ ಮಳೆಗಾಲದ ಬಳಿಕ ಆರಂಭವಾಗಬೇಕಾಗುತ್ತದೆ. ಅಲ್ಲಿಯ ತನಕ ತಡೆದುಕೊಳ್ಳುವ ತಾಳ್ಮೆ ಜನರಿಗಿಲ್ಲ. ಅದಕ್ಕಾಗಿ ಈ ಹೋರಾಟ ಎಂದರು.

ತಾ.ಪಂ. ಮಾಜಿ ಅಧ್ಯಕ್ಷ ಎಸ್‌. ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿದರು. ಕಿರಿಮಂಜೇಶ್ವರ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ, ಹೇರೂರು ಗ್ರಾ.ಪಂ. ಸದಸ್ಯ ಯು. ಮಂಜುನಾಥ ಭಟ್‌, ಜಿ.ಪಂ. ಸದಸ್ಯೆ ಗೌರಿ ದೇವಾಡಿಗ ಪ್ರತಿಭಟನನಿರತರನ್ನು ಉದ್ದೇಶಿಸಿ ಮಾತನಾಡಿದರು. 

Advertisement

ಚುನಾವಣೆ ಬಹಿಷ್ಕಾರ ಎಚ್ಚರಿಕೆ
ನೀತಿಸಂಹಿತೆ ಜಾರಿ ಆಗುವುದರೊಳಗೆ ದುರಸ್ತಿ ಕಾರ್ಯ ಆರಂಭವಾಗದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವುದಾಗಿ ಪ್ರತಿಭಟನಾ ನಿರತರು ಘೋಷಿಸಿದರು. ಮಧ್ಯಾಹ್ನ ಸ್ಥಳಕ್ಕೆ ಬಂದ ಎಂಜಿನಿಯರ್‌ ಮಂಜುನಾಥ ಮತ್ತು ದುರ್ಗಾದಾಸ್‌ ಇನ್ನು 7 ದಿನಗಳೊಳಗೆ ಟೆಂಡರು ಪ್ರಕ್ರಿಯೆ ಮುಗಿಸಿ, ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಶಾಸಕರ ಪರವಾಗಿ ಬಂದಿದ್ದ ದೀಪಕ್‌ಕುಮಾರ ಶೆಟ್ಟಿ ಶಾಸಕರು ಶುಕ್ರವಾರ ಬಂದು ಕಾಮಗಾರಿ ಆರಂಭಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು. ಆ ಬಳಿಕ ಪ್ರತಿಭಟನೆ ಹಿಂತೆಗದುಕೊಳ್ಳಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next