Advertisement

ಸಂಸದರಿಗೆ ಟಿಕೆಟ್‌ ವಂಚನೆ ವಿರೋಧಿಸಿ ಪ್ರತಿಭಟನೆ

07:42 AM Mar 17, 2019 | Team Udayavani |

ತುಮಕೂರು: ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್‌ ವಂಚನೆ ಆಗಿರುವುದನ್ನು ವಿರೋಧಿಸಿ, ಹಾಲಿ ಸಂಸದರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಯುವ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷ ಆರ್‌. ರಾಜೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಟೌನ್‌ಹಾಲ್‌ ವೃತ್ತದಲ್ಲಿ ಯುವ ಕಾಂಗ್ರೆಸ್‌ ನೇತೃತ್ವದಲ್ಲಿ ಶನಿವಾರ ಜಮಾಯಿಸಿದ ನೂರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಜೆಡಿಎಸ್‌ಗೆ ತುಮಕೂರು ಕ್ಷೇತ್ರ ಬಿಟ್ಟು ಕೊಟ್ಟಿರುವುದಕ್ಕೆ ಕಾಂಗ್ರೆಸ್‌ನ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 

ಆಗ್ರಹ: ರಾಜ್ಯದಲ್ಲಿ ಹಾಲಿ ಸಂಸದರು ಇರುವ ಲೋಕಸಭಾ ಕ್ಷೇತ್ರಗಳ ಪೈಕಿ ತುಮಕೂರು ಕ್ಷೇತ್ರವನ್ನು ಮಾತ್ರ ಜೆಡಿಎಸ್‌ಗೆ ಬಿಟ್ಟು ಕೊಟ್ಟಿರುವುದನ್ನು ವಿರೋಧಿಸಿ ಯುವ ಕಾಂಗ್ರೆಸ್‌ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಬೇಕು ಎಂದು ಆಗ್ರಹಿಸಿದರು.

ಟಿಕೆಟ್‌ ನೀಡಲೇಬೇಕು: ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ರಾಜ್ಯ ಉಪಾಧ್ಯಕ್ಷ ಆರ್‌.ರಾಜೇಂದ್ರ ಮಾತನಾಡಿ, ದೇಶದಲ್ಲಿ 44 ಜನ ಕಾಂಗ್ರೆಸ್‌ ಸಂಸದರು ಗೆದ್ದಿದ್ದಾರೆ. ಇವರ ಪೈಕಿ ಮುದ್ದಹನುಮೇಗೌಡರಿಗೆ ಟಿಕೆಟ್‌ ತಪ್ಪಿಸಲಾಗಿದೆ. ಯಾವುದೇ ಕಾರಣಕ್ಕೂ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟು ಕೊಡಬಾರದು. ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್‌ ನೀಡಲೇಬೇಕು ಎಂದು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು. 

ಹಾಲಿ ಸಂಸದರ ಅಭಿವೃದ್ಧಿ ಕಾರ್ಯಗಳು, ಜನಪರ ಕಾಳಜಿ ಪಕ್ಷಕ್ಕೆ ಬಲ ತಂದು ಕೊಟ್ಟಿದೆ. ಪಕ್ಷದತ್ತ ಜನರ ಒಲವು ಇರುವ ವೇಳೆ ಕ್ಷೇತ್ರ ಬಿಟ್ಟು ಕೊಡುವುದರಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ. ಈ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್‌ರವರ ಮೂಲಕ ಹೈಕಮಾಂಡ್‌ ಗಮನ ಸೆಳೆಯಲಾಗುವುದು ಎಂದರು.

Advertisement

ವರಿಷ್ಠರಲ್ಲಿ ಮನವಿ: ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ ಮಾತನಾಡಿ, ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆ ಮಾ.19ಕ್ಕೆ ಮುಂದೂಡಲಾಗಿದೆ. ಅಂದಿನ ಸಭೆಯಲ್ಲಿ ಪಕ್ಷದ ಹೈಕಮಾಂಡ್‌ ಈ ಕುರಿತು ಗಮನ ಹರಿಸಬೇಕು. ತುಮಕೂರು ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಹಾಲಿ ಸಂಸದ ಎಸ್‌.ಪಿ. ಮುದ್ದಹನುಮೇಗೌಡರನ್ನೇ ಘೋಷಣೆ ಮಾಡಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.  

ಬಿಟ್ಟು ಕೊಡಬಾರದು: ಮಾಜಿ ಶಾಸಕ ಎಸ್‌. ಶಫಿ ಅಹಮದ್‌ ಮಾತನಾಡಿ, ಸಂಸದ ಮುದ್ದಹನುಮೇಗೌಡರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷದ ಕಾರ್ಯಕರ್ತರು ಹೊತ್ತಿದ್ದಾರೆ. ಈಗಾಗಲೇ ಉಪಮುಖ್ಯಮಂತ್ರಿ ಪರಮೇಶ್ವರ್‌ ಅವರು ಕಾಂಗ್ರೆಸ್‌ನ ಎಲ್ಲ ನಾಯಕರನ್ನು ಭೇಟಿ ಮಾಡಿ ಕ್ಷೇತ್ರ ಉಳಿಸುವಂತೆ ಮನವಿ ಮಾಡಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಜೆಡಿಎಸ್‌ ಪಕ್ಷಕ್ಕೆ ಕ್ಷೇತ್ರ ಬಿಟ್ಟು ಕೊಡದೆ ಕಾಂಗ್ರೆಸ್‌ಗೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
 
ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತರಿಂದ ಸಂಸದ ಮುದ್ದಹನುಮೇಗೌಡ ಅವರ ಪರ ಜೈಕಾರ, ಜಯಘೋಷಗಳು ಮೊಳಗಿದವು. ಪ್ರತಿಭಟನೆಯಲ್ಲಿ ಮುಖಂಡರಾದ ಚೌದ್ರಿರಂಗಪ್ಪ, ಗೀತಾರುದ್ರೇಶ್‌, ಆಟೋರಾಜು, ತರುಣೇಶ್‌, ತು.ಬಿ. ಮಲ್ಲೇಶ್‌, ಪಾಲಿಕೆ ಸದಸ್ಯ ನಯಾಜ್‌ ಅಹಮದ್‌, ವೇಣುಗೋಪಾಲ್‌ ಸೇರಿದಂತೆ ನೂರಾರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next