ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆಯ 40ನೇ ಉಪ ಕಾಲುವೆಗೆ ಸಮರ್ಪಕ ನೀರು ಹರಿಸದಿರುವುದನ್ನು ಖಂಡಿಸಿ ವಿವಿಧ ಗ್ರಾಮಗಳ ನೂರಾರು ರೈತರು ಸೋಮವಾರ ಸಚಿವ ವೆಂಕಟರಾವ್ ನಾಡಗೌಡರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
40ನೇ ಕಾಲುವೆ ವ್ಯಾಪ್ತಿಯ ಅರಳಹಳ್ಳಿ, ಹಟ್ಟಿ ಕ್ಯಾಂಪ್, ಮಲ್ಲದಗುಡ್ಡ, ವಿರೂಪಾಪುರ, ನಾಲ್ಕು ಹಾಗೂ ಮೂರನೇ ಮೈಲ್ ಕ್ಯಾಂಪ್‌ಗ್ಳ ನೂರಾರು ರೈತರು ಸಚಿವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ರೈತ ವೆಂಕಟೇಶ ಮಾತನಾಡಿ, 40ನೇ ಉಪ ಕಾಲುವೆ ಮೇಲ್ಭಾಗದ ರೈತರು ಅಕ್ರಮ ತೂಬುಗಳನ್ನು ಮಾಡಿಕೊಂಡು ನೀರು ಪಡೆಯುತ್ತಿದ್ದಾರೆ. ಇವುಗಳ ತೆರವಿಗೆ ನೂರಾರು ಸಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ನೀರುಗಳ್ಳರೊಂದಿಗೆ ಶಾಮಿಲಾಗಿದ್ದಾರೆ. ಹೀಗಾಗಿ ಕಳೆದ ಮೂರು ವರ್ಷದಿಂದ ಕನಿಷ್ಠ ಜೋಳ ಬೆಳೆಯಲು ಕೂಡ ನೀರು ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಮನವಿ ಆಲಿಸಿದ ಸಚಿವ ವೆಂಕಟರಾವ್ ನಾಡಗೌಡ, ಅನಧಿಕೃತ ಪೈಪ್, ಪಂಪ್‌ಸೆಟ್ ಹಾಕಿಕೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಲ್ಲಿಯವರೆಗೆ ನೀರಾವರಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸರಿಯಾಗಿ ನೀರು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಈಗ ಅಧಿಕಾರಿಗಳನ್ನು ಹಾಕಿಕೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತ ಮುಖಂಡರಾದ ಶರಣಬಸವ, ಅಮರೇಶ, ಬಸಪ್ಪ, ಬಸವರಾಜ, ಅಮರೇಗೌಡ, ಉಮೇಶ, ಸಿದ್ದನಗೌಡ, ಮಲ್ಲಿಕಾರ್ಜುನಯ್ಯ, ವೀರಭದ್ರಯ್ಯ, ಹನುಮಂತ, ರಾಮಲಿಂಗಪ್ಪ, ಮಲ್ಲಪ್ಪ, ನಿಜಗುಣಯ್ಯ ಮುಂತಾದವರು
ಇದ್ದರು.