Advertisement

ಎಂಇಎಸ್‌: ರಾಜಧಾನಿಯಲ್ಲಿ ಆರದ ಕಾವು

11:42 AM Dec 21, 2021 | Team Udayavani |

ಬೆಂಗಳೂರು: ಅತ್ತ ಬೆಳಗಾವಿಯಲ್ಲಿ ಎಂಇಎಸ್‌ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ಬೃಹತ್‌ ಹೋರಾಟನಡೆಸಿದರೆ ಇತ್ತ ರಾಜಧಾನಿ ಬೆಂಗಳೂರಿನಲ್ಲೂ ಕೂಡ ಸೋಮವಾರ ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪ್ರತಿಕೃತಿ ದಹಿಸಿ ಸಿಟ್ಟು ಹೊರಹಾಕಿದರು. ಹೀಗಾಗಿ ನಗರದ ಮೈಸೂರು ಬ್ಯಾಂಕ್‌ ವೃತ್ತ ಮತ್ತು ಸಿಟಿ ರೈಲ್ವೆ ನಿಲ್ದಾಣದ ಬಳಿಯಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣನ ಪ್ರತಿಮೆ ಸ್ಥಳ ಪ್ರತಿಭಟನಾಕಾರರ ಹೋರಾಟಗಾರರ ಅಖಾಡವಾಗಿತ್ತು.

Advertisement

ಕನ್ನಡ ಒಕ್ಕೂಟ ಮತ್ತು ಜಯಕರ್ನಾಟಕ ಸಂಘಟನೆ ಕಾರ್ಯ ಕರ್ತರು ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಧರಣಿ ನಡೆದರೆ, ಅತ್ತ ಸಿಟಿ ರೈಲ್ವೆ ನಿಲ್ದಾಣದಲ್ಲಿ ರಾಯಣ್ಣನ ಪ್ರತಿಮೆ ಬಳಿ ಕುರುಬರ ಸಂಘ ಮತ್ತು ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿ ದುಂಡಾವರ್ತನೆ ತೋರಿ ರುವ ಕಿಡಿಗೇಡಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು. ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌, ಎಂಇಎಸ್‌ ವಿರುದ್ಧ ಮಾತನಾಡುವ ತಾಕತ್ತು ನಮ್ಮ ಜನಪ್ರತಿನಿಧಿಗಳಿಗೆ ಇಲ್ಲ. ಗೃಹಸಚಿವ ಆರಗ ಜ್ಞಾನೇಂದ್ರ ಕೂಡ ಮಹಾರಾಷ್ಟ್ರ ದೊಂದಿಗೆ ನೆಂಟಸ್ಥನ ಬೆಳೆಸಿದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು. ಹಾಗೆಯೇ ಕಾಂಗ್ರೆಸ್‌ ಪಕ್ಷ ಕೂಡ ಮಹಾರಾಷ್ಟ್ರದಲ್ಲಿ ಶಿವಸೇನೆಗೆ ನೀಡಿದ ಬೆಂಬಲ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಮರಾಠಿ ಅಭಿವೃದ್ಧಿ ಪ್ರಾಧಿಕಾರ ಬೇಕಿತ್ತಾ?

ಡಾ.ರಾಜ್‌ ಕುಮಾರ್‌ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ಬೆಳಗಾವಿಯಲ್ಲಿ ನಡೆದ ಎಂಇಎಸ್‌ ಪುಂಡಾಟಿಕೆಗೆ ಬಿಜೆಪಿ ನೇರ ಹೊಣೆ. ಕನ್ನಡಪರ ಸಂಘಟನೆಗಳು ವಿರೋಧಿಸಿದ್ದರೂ ತನ್ನ ರಾಜಕೀಯ ಲಾಭಕ್ಕಾಗಿ ಮರಾಠಿ ಪ್ರಾಧಿಕಾರ ಮಾಡಿದ್ದೀರಿ. ಇದು ಬೇಕಿತ್ತಾ?ಎಂದು ಪ್ರಶ್ನಿಸಿದರು. ಎಂಇಎಸ್‌ ಸಂಘಟನೆಗೆ ನಿಷೇಧ ಹೇರುವ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಹೋರಾಟ ನಡೆಸಲಿವೆ. ಈ ಹೋರಾಟದಲ್ಲಿ ಸಿನಿಮಾ ನಟರು ಸೇರಿದಂತೆ ಎಲ್ಲಾ ಕನ್ನಡಪರ ಸಂಘಟನೆಗಳ ಒಟ್ಟಾಗಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

Advertisement

ಎಂಇಎಸ್‌ ಪುಂಡಾಟಿಕೆ ಸಹಿಸಲಾಗದು

ಬೆಳಗಾವಿಯಲ್ಲಿ ಶಿವಸೇನೆ ಮತ್ತು ಎಂಇಎಸ್‌ ಪುಂಡರು ಪದೇ ಪದೆ ದುಂಡಾ ವರ್ತನೆ ತೋರುತ್ತಿದ್ದಾರೆ. ಸಂಗೊಳ್ಳಿರಾಯಣ್ಣನ ಪ್ರತಿಕೃತಿ ವಿರೂಪಗೊಳಿಸಿದ್ದು ಅಲ್ಲದೆ ಮಹಾರಾಷ್ಟ್ರದಲ್ಲಿ ನಾಡದ್ರೋಹಿ ಗಳು ಕನ್ನಡ ಧ್ವಜಕ್ಕೂ ಬೆಂಕಿ ಹಚ್ಚಿದ್ದಾರೆ. ಇದನ್ನು ಸಹಿಸಲಾಗದು ಎಂದು ಕರವೇ ರಾಜ್ಯಾಧ್ಯಕ್ಷ ಶಿವರಾಮೇಗೌಡ ಎಂದು ಹೇಳಿ ದರು. ಸರ್ಕಾರದ ವಾಹನಗಳಿಗೆ ಹಾನಿಯುಂಟು ಮಾಡುವ ಮೂಲಕ ಕಿಡಿಗೇಡಿಗಳು ಸರ್ಕಾರದ ಮೇಲೂ ದಾಳಿ ಮಾಡಿ ದ್ದಾರೆ. ಆದರೆ ಸರ್ಕಾರ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುತ್ತಿರುವುದು ಸರಿಯಲ್ಲ ಎಂದರು. ಜಯಕರ್ನಾಟಕ ಸಂಘಟನೆಯ ಮುಖಂಡ ಜಗದೀಶ್‌ ಗೌಡ ಮಾತನಾಡಿ, ಎಂಇಎಸ್‌ ಪುಂಡರು ಕನ್ನಡಿಗರ ಸ್ವಾಭಿಮಾನ ಕೆಣಕುವ ಪ್ರಯತ್ನ ಮಾಡಿದ್ದಾರೆ. ಇದನ್ನು ಸಹಿಸಲಾಗದು ಎಂದು ಹೇಳಿದ್ದಾರೆ.

ಎಂಇಎಸ್‌ ವಿರುದ್ಧ ಕ್ರಮಕ್ಕೆ ನಿರ್ಮಾಪಕರ ಸಂಘ ಆಗ್ರಹ

ಬೆಳಗಾವಿಯಲ್ಲಿ ಕನ್ನಡ ಧ್ವಜ ದಹಿಸಿರುವ ಘಟನೆಯನ್ನು ಖಂಡಿಸಿರುವ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಈ ಕುರಿತು ಮಾತನಾಡಿರುವ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಡಿ.ಕೆ. ರಾಮಕೃಷ್ಣ (ಪ್ರವೀಣ ಕುಮಾರ್‌), “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಇತ್ತೀಚಿನ ವರ್ಷಗಳಲ್ಲಿ ಎಂಇಎಸ್‌ ಸೇರಿದಂತೆ ಕೆಲವು ಸಂಘಟನೆಗಳು ಬೆಳಗಾವಿಯಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಕನ್ನಡ ಧ್ವಜ ಸುಟ್ಟಿರುವುದು, ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಅವಮಾನ ಮಾಡಿರುವ ಘಟನೆ ಯನ್ನು ಯಾವುದೇ ಕಾರಣಕ್ಕೂ ಕ್ಷಮಿಸಲಾಗದು. ಈ ಎಲ್ಲ ಘಟನೆಗಳಿಗೆ ಮೂಲ ಕಾರಣವಾಗಿರುವ ಎಂಇಎಸ್‌ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಬೆಳಗಾವಿಯಲ್ಲಿ ಪುಂಡಾಟ ಮಾಡಿದ ಕಿಡಿಗೇಡಿಗಳನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು. “ಕನ್ನಡ ನೆಲ, ಜಲ, ಗಡಿ, ಭಾಷೆಯ ವಿಚಾರದಲ್ಲಿ ಎಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದಿರುವ ನಿರ್ಮಾಪಕರ ಸಂಘದ ಅಧ್ಯಕ್ಷ ರಾಮಕೃಷ್ಣ, “ಇತ್ತೀಚೆಗೆ ನಡೆಯುತ್ತಿರುವ ಕನ್ನಡ ವಿರೋಧಿ ಚಟುವಟಿಕೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಗಂಭೀರ ಹೋರಾಟ ನಡೆಸಲು ನಿರ್ಮಾಪಕರ ಸಂಘ ಯೋಚಿಸುತ್ತಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರರಂಗದ ಕಲಾವಿದರು, ತಂತ್ರಜ್ಞರ ಸಹಕಾರದಲ್ಲಿ ಕಾರ್ಯಯೋಜನೆ ರೂಪಿಸಲಾಗುವುದು. ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.

22ಕ್ಕೆ ಶಿವಾಜಿ ಮಹಾರಾಜರ ಪ್ರತಿಮೆ ಸ್ವಚ್ಛ ಕಾರ್ಯ

ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ಬುಧವಾರ (ಡಿ.22) ರಂದು ನಗರದ ಭಾಷ್ಯಂ ಸರ್ಕಲ್‌ನಲ್ಲಿರುವ ಶಿವಾಜಿ ಮಹಾರಾಜರ ಪುತ್ಥಳಿ ಸ್ವತ್ಛಗೊಳಿಸಿ, ಮಾಲಾರ್ಪಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ರಾಜ್ಯಾಧ್ಯಕ್ಷ ವಿ.ಎಸ್‌.ಶಾಮಸುಂದರ್‌ ಗಾಯಕ್‌ವಾಡ್‌, ಅಂದು ಬೆಳಗ್ಗೆ 11 ಗಂಟೆಗೆ ಶಿವಾಜಿ ಮಹಾರಾಜರ ಪ್ರತಿಮೆ ಶುಚಿತ್ವಗೊಳಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಮರಾಠಿಗರು ಮತ್ತು ಕನ್ನಡಿಗರು ಸೌಹಾರ್ದಯುತವಾಗಿ ಬದುಕಿತ್ತಿದ್ದಾರೆ. ಆದರೆ ಕೆಲವು ಕಿಡಿಗೇಡಿದಳು ಶಾಂತಿಯನ್ನು ಕದಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ರಾಜ್ಯದಲ್ಲಿರುವ ಎಲ್ಲಾ ರಾಷ್ಟ್ರನಾಯಕರ ಪುತ್ಥಳಿಗಳಿಗೆ ರಕ್ಷಣೆ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next