ಪಿರಿಯಾಪಟ್ಟಣ: ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚಿ, ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಭಗ್ನ ಗೊಳಿಸಿ ಕನ್ನಡಿಗರ ತಾಳ್ಮೆಯನ್ನು ಕೆಣಕಿರುವ ಎಂಇಎಸ್ ಪುಂಡಾಟಿಕೆ ವಿರುದ್ಧ ರಾಜ್ಯ ಕುರುಬರ ಸಂಘದ ವತಿಯಿಂದ ಡಿ.24 ರಂದು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕುರುಬರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ತಿಳಿಸಿದರು.
ಪಟ್ಟಣದ ಕನಕ ಸಮುದಾಯ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಗೊಳ್ಳಿ ರಾಯಣ್ಣ ರಾಷ್ಟ್ರ ಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ನೆಲಜಲ ಭಾಷೆಗಾಗಿ ತನ್ನ ಜೀವನವನ್ನೇ ಪಣಕ್ಕಿಟ್ಟು ಪ್ರಾಣ ತ್ಯಾಗ ಮಾಡಿದ ಮಹಾನ್ ಕ್ರಾಂತಿಕಾರಿ, ಇಂಥ ಮಹಾನ್ ನಾಯಕ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕಿಡಿಗೇಡಿಗಳು ಕಳೆದ ಶುಕ್ರವಾರ ರಾತ್ರಿ ವಿರೂಪಗೊಳಿಸಿರುವುದು ಅಕ್ಷಮ್ಯ ಅಪರಾಧ, ಇದರಿಂದ ಸ್ವಾಭಿಮಾನಿ ಕನ್ನಡಿಗರ ತಾಳ್ಮೆಗೆ ಮತ್ತೆ ಪೆಟ್ಟು ಬಿದ್ದಂತಾಗಿದೆ. ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ವಿರೂಪಗೊಳಿಸಿದವರ ವಿರುದ್ದ ಬೆಳಗಾವಿ ಸೇರಿದಂತೆ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಇದರ ಪೂರ್ವಭಾವಿಯಾಗಿ ಇದೇ ಡಿ.24ರ ಶುಕ್ರವಾರದಂದು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಪ್ರತೀಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ರಾಯಣ್ಣನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ : ರಾಜ್ಯದಲ್ಲಿಂದು 295 ಕೋವಿಡ್ ಸೋಂಕು ಪತ್ತೆ: 5 ಸಾವು;12 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ವಿ.ಜಿ.ಅಪ್ಪಾಜಿಗೌಡ ಮಾತನಾಡಿ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ರಾಡ್ನಿಂದ ಹೊಡೆದು ಅದರ ಡಾಲ್ ಭಗ್ನಗೊಳಿಸಿದ್ದಾರೆ. ಮೂರ್ತಿಯನ್ನು ಹೊಡೆದು ಭಗ್ನಗೊಳಿಸಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಿ ಸುವರ್ಣಸೌಧದ ಆವರಣದಲಲ್ಲಿ ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮಜಿಯ ಪ್ರತಿಮೆಯನ್ನು ಸ್ಥಾಪಿಸುವ ಭರವಸೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರಿಗೆ ಅಭಿನಂದನೆಗಳು. ಅದೇ ರೀತಿ ಪ್ರತಿಮೆಯನ್ನು ಭಗ್ನ ಗೊಳಿಸಿರುವ ಸ್ಥಳದಲ್ಲೇ ರಾಯಣ್ಣನ ಪ್ರತಿಮೆಯನ್ನು ಮರು ಸ್ಥಾಪಿಸಬೇಕು ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ 10 ದಿನಗಳ ಗಡುವು ನೀಡಲಾಗಿದೆ ತಪ್ಪಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬೆಳಗಾವಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹೆಚ್.ಡಿ.ಕೋಟೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವಪ್ಪ, ನಿವೃತ್ತ ಮುಖ್ಯ ಶಿಕ್ಷಕ ಮಲ್ಲಣ್ಣ, ಮುಖಂಡರಾದ ದೊರೆಕೆರೆ ನಾಗೇಂದ್ರ, ಕೋಳಿ ಮಂಜು, ಸಾಲುಗೊಪ್ಪಲು ಪುಟ್ಟರಾಜು, ಚಿಕ್ಕಣ್ಣ, ರಾಜೇಗೌಡ, ಮಂಜು, ಭೀಮಣ್ಣ, ಲೋಹಿತ್, ಅಂಕನಹಳ್ಳಿ ಚಂದ್ರು, ಮೇಲೂರು ಜಗದೀಶ್, ನವೀನ್, ನಂಜುಂಡೇಗೌಡ, ಜಯರಾಂ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.