Advertisement

ಹೊರ ಗುತ್ತಿಗೆ ನೌಕರರ ವಜಾ ವಿರೋಧಿಸಿ ಧರಣಿ

09:55 AM Jul 06, 2019 | Suhan S |

ಬಾಗಲಕೋಟೆ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಡಿ ಗ್ರೂಪ್‌ ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸದಂತೆ ಒತ್ತಾಯಿಸಿ ಕರ್ನಾಟಕ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘ ಜಿಲ್ಲಾಡಳಿತ ಭವನ ಎದುರು ಹೊರ ಗುತ್ತಿಗೆ ನೌಕರರು ಶುಕ್ರವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.

Advertisement

ಹೊರ ಗುತ್ತಿಗೆ ನೌಕರರು ಪ್ರತಿಭಟನಾ ಮೆರವಣಿಗೆ ಮೂಲಕ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಂತರ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ವೇಳೆ ಮಾತನಾಡಿದ ಹೊರಗುತ್ತಿಗೆ ನೌಕರರರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲ್ಪಡುತ್ತಿರುವ ಮೆಟ್ರಿಕ್‌ ಪೂರ್ವ ಮತ್ತು ಮೆಟ್ರಿಕ್‌ ನಂತರದ ಬಾಲಕ, ಬಾಲಕಿಯರ ವಸತಿ ನಿಲಯಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರು, ಸ್ವಚ್ಛತಾ ಸಿಬ್ಬಂದಿ ಮತ್ತಿತರ ಹುದ್ದೆಗಳಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಈಗ ಸೇವೆಯಿಂದ ವಜಾಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಆರೋಪಿಸಿದರು.

ವಿವಿಧ ಹುದ್ದೆಗಳಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಕಾರ್ಮಿಕರು ಅತ್ಯಂತ ಬಡವರು, ವಿಧವೆಯರು, ಮಹಿಳೆಯರಾಗಿದ್ದಾರೆ. ಅವರೆಲ್ಲ ಈ ಕೆಲಸ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಸೇವೆಯಿಂದ ವಜಾಗೊಳಿಸಿದರೆ ರಾಜ್ಯದಲ್ಲಿ 3,312 ಗುತ್ತಿಗೆ ನೌಕರರ ಬದುಕು ಬೀದಿಗೆ ಬರಲಿದೆ. ಮಾನವೀಯ ಆಧಾರದ ಮೇಲೆ ಸೇವೆಯಲ್ಲಿ ಮುಂದುವರೆಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಭರವಸೆ ನೀಡಿದ್ದರೂ ಕೂಡ ಸೇವೆಯಿಂದ ತೆಗೆದು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ರೇಣುಕಾ ಬೆನಕೊಪ್ಪ, ಸಂಗೀತಾ ಭಜಂತ್ರಿ, ರಾಜು ಲಮಾಣಿ, ಭುವನೇಶ್ವರಿ ಅಂಗಡಿ, ಮಲ್ಲಮ್ಮ ನಿಶಾನೆ, ಐ.ಬಿ. ಅಂಗಡಿ, ಸಿ.ವೈ. ಚಲವಾದಿ, ಲಕ್ಷ್ಮಿ ಗುರಿಕಾರ ಮುಂತಾದವರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next