ಶಹಾಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ಮೇರೆಗೆ ಇಲ್ಲಿನ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ರೈತ ಮುಖಂಡ ಚನ್ನಪ್ಪ ಆನೆಗುಂದಿ, ಕೇಂದ್ರದ ಕೃಷಿ ಮಸೂದೆ ರೈತರ ಪಾಲಿಗೆ ಕಂಟಕವಾಗಿವೆ. ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಜಾರಿಗೊಳಿಸುವ ಮೂಲಕ ಕೇಂದ್ರ ಸರ್ಕಾರ ಕೃಷಿ ಕಾಯಕದಲ್ಲೂ ಕಾರ್ಪೊರೇಟ್ ಸಂಸ್ಥೆಗಳಿಗೆ ಆಹ್ವಾನಿಸುತ್ತಿದೆ. ಇದು ರೈತರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಬೆನ್ನೆಲುಬಾಗಿದ್ದ ರೈತರ ಬೆನ್ನೆಲುಬನ್ನೇ ಮುರಿಯಲು ಬಿಜೆಪಿ ಮುಂದಾಗಿದೆ. ದೇಶದಲ್ಲಿ ಶೇ.70ರಷ್ಟು ಕೃಷಿಕರಿದ್ದು, ಇಂತಹ ಅಸಮಂಜಸ ತಿದ್ದುಪಡಿ ಕಾಯ್ದೆಗಳಿಂದ ಕೃಷಿ ವಲಯವನ್ನು ಒಕ್ಕಲೆಬ್ಬಿಸುವ ಕಾರ್ಯ ನಡೆಯುತ್ತಿದೆ. ಕೂಡಲೇ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ದೇಶಾದ್ಯಂತ ರೈತ ಸಮುದಾಯ ರೊಚ್ಚಿಗೇಳಲಿದೆ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ತಾಲೂಕು ಆಡಳಿತ ಕೂಡಲೇ ಪರಿಹಾರ ಕಲ್ಪಿಸಬೇಕು. ತಾಲೂಕಿನ ತಿಪ್ಪನಳ್ಳಿ, ಬಾಣತಿಹಾಳ, ವನದುರ್ಗ ಗ್ರಾಮದ ದಲಿತರಿಗೆ ರುದ್ರಭೂಮಿ ಮಂಜೂರು ತಿಪ್ಪನಳ್ಳಿ ಗ್ರಾಮದ ರಸ್ತೆ ಮತ್ತು ಸೇತುವೆ ದುರಸ್ತಿಗೊಳಿಸಬೇಕು. ಆತ್ಮಹತ್ಯೆ ಮಾಡಿಕೊಂಡ ಇಬ್ರಾಹಿಂಪುರ ಗ್ರಾಮದ ರೈತ ಮೌನೇಶ ಸಾಬಯ್ಯ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಒದಗಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಕೂಲಿಕಾರರ ಸಂಘದ ಕಾರ್ಯದರ್ಶಿ ನಿಂಗಣ್ಣ ನಾಟೇಕಾರ, ಅಂಬಲಯ್ಯ ಬೇವಿನಕಟ್ಟಿ, ಹೊನ್ನಪ್ಪ ಮಾನ್ಪಡೆ, ದೇವಿಂದ್ರಪ್ಪಗೌಡ ಪೊಲೀಸ್ ಪಾಟೀಲ, ಮಲಕಣ್ಣ ಚಿಂತಿ ಸೇರಿದಂತೆ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು