ದಾವಣಗೆರೆ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ರಾಜೀನಾಮೆ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಅಮಾನತು ಹಾಗೂ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಿಕ್ಷಣ ಇಲಾಖೆ ನ.26 ರಂದು ಸಂವಿಧಾನ ದಿನ ಆಚರಣೆಗೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೋಲೆಯಲ್ಲಿ ಸಂವಿಧಾನವನ್ನು ಡಾ| ಬಿ.ಆರ್. ಅಂಬೇಡ್ಕರ್ ಒಬ್ಬರೇ ಬರೆದಿಲ್ಲ ಎಂಬ ಅಂಶ ಉಲ್ಲೇಖೀಸುವ ಮೂಲಕ ಅಂಬೇಡ್ಕರ್ ಅವರಿಗೆ ಘೋರ ಅಪಮಾನ ಮಾಡಿರುವುದನ್ನು ಸಂಘಟನೆ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದು ದೂರಿದರು.
ಇಡೀ ವಿಶ್ವವೇ ಅಂಬೇಡ್ಕರ್ ಮತ್ತು ಅವರು ಬರೆದಂತಹ ಸಂವಿಧಾನವನ್ನು ಕೊಂಡಾಡುತ್ತಿವೆ. ಆದರೆ, ರಾಜ್ಯ ಸರ್ಕಾರ ಅಂಬೇಡ್ಕರ್ ಪ್ರತಿಭೆಯನ್ನೇ ಅನುಮಾನದಿಂದ ನೋಡುವಂತಹ ಕೆಲಸ ಮಾಡಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಡಾ| ಬಿ.ಆರ್. ಅಂಬೇಡ್ಕರ್ ಒಬ್ಬರೇ ಸಂವಿಧಾನವನ್ನು ಬರೆದಿಲ್ಲ. ಸಂವಿಧಾನ ಕರಡು ಸಮಿತಿಯಲ್ಲಿನ 299 ಜನರು ನೀಡಿದ್ದ ವರದಿಯನ್ನು ಜೋಡಣೆ ಮಾಡಿದ್ದಾರೆ ಎಂದು ಸುತ್ತೋಲೆ ಹೊರಡಿಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಸಂವಿಧಾನ ಬರೆದವರು ಯಾರು ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ. ಐತಿಹಾಸಿಕ ಪ್ರಮಾದದ ಸುತ್ತೋಲೆಗೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ತೀವ್ರ ವಿರೋಧ ವ್ಯಕ್ತವಾದ ನಂತರ ಸುತ್ತೋಲೆ ಹಿಂದಕ್ಕೆ ಪಡೆಯಲಾಗಿದೆ ಎಂದು ಸಚಿವ ಸುರೇಶ್‌ಕುಮಾರ್ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಸುತ್ತೋಲೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರನ್ನು ಅಮಾನತು ಮಾಡುವ ಜೊತೆಗೆ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಇಡೀ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಡಾ| ಅಂಬೇಡ್ಕರ್‌ರವರ ಬಗ್ಗೆ ಪದೆ ಪದೇ ಆಪಸ್ವರ ಕೇಳಿ ಬರುತ್ತದೆ. ಸಂವಿಧಾನದ ಪುನರ್ ಪರಾಮರ್ಶೆ, ಬದಲಾವಣೆ ಮಾಡಬೇಕು ಎಂಬ ಮಾತುಗಳ ಮೂಲಕ ಅಂಬೇಡ್ಕರ್ ಮೇಲಿನ ವಿರೋಧಿ ಭಾವನೆ ವ್ಯಕ್ತವಾಗುತ್ತಿರುವುದು ಖಂಡನೀಯ ಎಂದು ದೂರಿದರು.
ಸಂಘಟನೆಯ ರಾಜ್ಯ ಸಂಚಾಲಕ ಎಚ್. ಮಲ್ಲೇಶ್, ಎಸ್.ಎಚ್. ಅಣ್ಣಪ್ಪ, ಎಚ್.ಸಿ. ಮಲ್ಲಪ್ಪ, ನೀಲಗುಂದ ಅಂಜಿನಪ್ಪ. ಅಣ್ಣಪ್ಪ ತಣಿಗೆರೆ ಇತರರು ಇದ್ದರು.