ಪಡುಬಿದ್ರಿ: ಹೆಜಮಾಡಿ ಟೋಲ್ ವಿರುದ್ಧ ಕರವೇ ಪ್ರತಿಭಟನೆ ಗುರುವಾರ 32ನೇ ದಿನಕ್ಕೆ ಕಾಲಿಟ್ಟಿದೆ. ಇದೇ ವೇಳೆ ಮಣ್ಣರಾಶಿಯಲ್ಲೇ ಮಲಗಿ, ಕೆಸರರೆಚಿ ವಿಶಿಷ್ಟ ಪ್ರತಿಭಟನೆಯನ್ನು ಕಾರ್ಯಕರ್ತ ಆಸೀಫ್ ನಡೆಸಿದ್ದಾರೆ.
ಪಡುಬಿದ್ರಿ ಜಿ.ಪಂ. ವ್ಯಾಪ್ತಿಯ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯಿತಿ, ನವಯುಗ ಕಂಪೆನಿಯ ಕಳಪೆ ಕಾಮಗಾರಿ ವಿರುದ್ಧ ಪ್ರತಿಭಟನೆ ಆರಂಭವಾದ ಬಳಿಕ ಸದ್ಯ ಪಡುಬಿದ್ರಿಯ ವಾಹನಗಳಿಗೆ ಸುಂಕ ವಿನಾಯಿತಿಯನ್ನು ನವಯುಗದ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ನೀಡಲಾಗುತ್ತಿದೆ. ಆದರೆ ಪಡುಬಿದ್ರಿಯಲ್ಲಿ ನಿಧಾನಗತಿ ಕಾಮಗಾರಿ ಮತ್ತು ಕೆಲವೊಂದು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ಮುಂದು ವರಿಸುವುದಾಗಿ ಜಿಲ್ಲಾಧಿಕಾರಿ ಭೇಟಿ ನೀಡಿದ್ದ ವೇಳೆ ಕಾರ್ಯಕರ್ತರು ಹೇಳಿದ್ದರು.
ಸಂಸದರಿಗಾಗಿ ನಾವೇ ಕೆಸರೆರೆಚಿಕೊಂಡಿದ್ದೇವೆ
ನಮ್ಮ ಹೋರಾಟ ಫಲ ನೀಡಿದೆ. ಈಗಾಗಲೇ ಕಾಮಗಾರಿಗಳಿಗೆ ವೇಗ ದೊರೆತಿದ್ದು ಪಡುಬಿದ್ರಿಯ ಸರ್ವಿಸ್ ರಸ್ತೆಗಾಗಿ ಒಳಚರಂಡಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಮರದ ಕಾಂಡಗಳು ಇನ್ನೂ ಇದ್ದಲ್ಲೇ ಇದ್ದು ಇವುಗಳ ಸಾಗಣೆ ಆಗಬೇಕು. ಬಸ್ ನಿಲ್ದಾಣದ ಕಾಮಗಾರಿಯೂ ಇನ್ನೂ ಆರಂಭ ಗೊಂಡಿಲ್ಲ. ಉಚ್ಚಿಲದಲ್ಲಿನ ಪಳಿಯುಳಿಕೆ ಗಳನ್ನು ತೆಗೆಯಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಗಳಾದರೂ ಉಡುಪಿಯ ಸಂಸದೆ ಶೋಭಾ ಕರಂದ್ಲಾಜೆ ಅವರು ನಮ್ಮತ್ತ ಗಮನ ಹರಿಸಿಲ್ಲ. ಮೂರು ದಿನ ದಲ್ಲಿ ತೀರ್ಮಾನಕ್ಕೆ ಬರುವುದಾಗಿ ಹೇಳಿ ಹೋಗಿದ್ದ ಜಿಲ್ಲಾಧಿಕಾರಿ ಅವರಿಂದಲೂ ಉತ್ತರ ಬಾರದ ಕಾರಣ ವಿನೂತನ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಹೇಳಿದರು.
ಕಾಪು ಘಟಕಾಧ್ಯಕ್ಷ ಸೆಯ್ಯದ್ ನಿಝಾಮ್, ಗ್ರಾ. ಪಂ. ಸದಸ್ಯರಾದ ಹಸನ್, ಬುಡಾನ್ ಸಾಹೇಬ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.