ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ದಲಿತಪರ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಸಾತನೂರು ವೃತ್ತದ ಬಳಿ ಇರುವ ಅಂಬೇಡ್ಕರ್ ಭವನದ ಬಳಿಯಿಂದ ತಹಶೀಲ್ದಾರ್ ಕಚೇರಿಯವರೆಗೆ ಮೆರವಣಿಗೆ ನಡೆಸಿದ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರಕರ್ತರು ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದರು.
ಮಾಜಿ ಸಿಎಂ ಕುಮಾರಸ್ವಾಮಿ ದಲಿತ ವಿರೋಧಿ ಧೋರಣೆ ಹೊಂದಿದ್ದು, ಪದೇಪದೆ ದಲಿತರ ವಿರುದ್ಧ ಮಾತನಾಡುವುದನ್ನು ರೂಢಿಸಿಕೊಂಡಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ: ಮುಸ್ಲಿಮರನ್ನು ಓಲೈಸುವ ಭರದಲ್ಲಿ ಈ ಬಾರಿ ದಲಿತ ವಿರೋಧಿ ಹೇಳಿಕೆ ನೀಡಿದ್ದಾರೆ. ಉನ್ನತ ಸ್ಥಾನ ಅಲಂಕರಿಸಿದ್ದವರು. ಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಆದ್ದರಿಂದ, ಅವರು ಈ ಕೂಡಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಮುಸ್ಲಿಂ ಸಮುದಾಯವನ್ನು ಓಲೈಸುವ ಭರದಲ್ಲಿ ಮುಖ್ಯಮಂತ್ರಿಯಾಗದಿರಲು ಸಿ.ಎಂ.ಇಬ್ರಾಹಿಂ ಏನು ಅಸ್ಪೃಶ್ಯರೆ ಎಂಬ ದಾಟಿಯಲ್ಲಿ ಮಾತನಾಡಿದ ಅವರು, ದಲಿತರು ಸಿಎಂ ಆಗಬಾರದು ಎಂಬುದನ್ನು ಪರೋಕ್ಷ ವಾಗಿ ಪ್ರತಿಪಾದಿಸಿದ್ದಾರೆ. ಒಂದು ಸಮುದಾಯವನ್ನು ಓಲೈಸುವ ಭರದಲ್ಲಿ ಇನ್ನೊಂದು ಸಮುದಾಯದ ತೇಜೋವಧೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ದಲಿತರ ಮೇಲೆ ದಬ್ಬಾಳಿಕೆ: ಕುಮಾರಸ್ವಾಮಿ ತಾಲೂಕಿನಿಂದ ಆಯ್ಕೆಯಾದ ನಂತರ ದಲಿತರ ಅಭಿವೃದ್ಧಿಗಾಗಿ ಅವರು ಯಾವುದೇ ಯೋಜನೆಯನ್ನು ಜಾರಿಗೆ ತರಲಿಲ್ಲ. ದಲಿತರ ಕುಂದುಕೊರತೆ ಸಭೆಯನ್ನು ಒಂದು ಬಾರಿಯೂ ನಡೆಸಲಿಲ್ಲ. ಅವರು ಸದಾ ದಲಿತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಇಂತಹವರನ್ನು ದಲಿತರು ಏಕೆ ಬೆಂಬಲಿಸಬೇಕು ಎಂದು ಪ್ರಶ್ನಿಸಿದರು.
ಹಾಸನದಿಂದ ಇಲ್ಲಿಗೆ ಬಂದು ನೆಲೆ ನಿಂತ ಇವರು ಇದೀಗ ನಮ್ಮ ಮೇಲೆಯೇ ದಬ್ಟಾಳಿಕೆ ನಡೆಸುತ್ತಿ ದ್ದಾರೆ. ದಲಿತರೆಂದರೆ ಬೆಲೆಯೇ ಇಲ್ಲ ವರ್ತಿಸುತ್ತಿದ್ದಾರೆ. ಇವರಿಗೆ ದಲಿತರ ಶಕ್ತಿ ಏನೆಂಬುದನ್ನು ತೋರಿಸಬೇಕಿದ್ದು, ಮುಂದಿನ ಚುನಾವಣೆಯಲ್ಲಿ ದಲಿತರೆಲ್ಲ ಒಂದಾಗಿ ಇವರಿಗೆ ಉತ್ತರ ನೀಡಬೇಕು ಎಂದರು.
ಜಿಪಂ ಮಾಜಿ ಸದಸ್ಯ ಸದಾನಂದ, ತಾಪಂ ಮಾಜಿ ಸದಸ್ಯ ಮತ್ತಿಕೆರೆ ಹನು ಮಂತಯ್ಯ, ಕೋಟೆ ಸಿದ್ದರಾಮಯ್ಯ, ನೀಲಸಂದ್ರ ಪ್ರಕಾಶ್, ಜಯಕಾಂತ್, ಚಾಲುಕ್ಯ, ಚಕ್ಕಲೂರು ಚೌಡಯ್ಯ, ಚಿಕ್ಕೇನಹಳ್ಳಿ ಶಿವರಾಮು, ವಂದಾರಗುಪ್ಪೆ ರಾಜೇಶ್, ಡಾ. ರವಿ ಕುಮಾರ್ ಕೊಣ್ಣೂರು, ಮಂಗಳವಾರಪೇಟೆ ಶೇಖ, ಎಸ್.ಕುಮಾರ್ ಇದ್ದರು.