Advertisement

ತಿದ್ದುಪಡಿ ಕಾಯ್ದೆ ರೈತರ ಪಾಲಿಗೆ ಮರಣ ಶಾಸನ

04:05 PM Sep 29, 2020 | Suhan S |

ಯಾದಗಿರಿ: ಸರ್ಕಾರದ ಭೂ ಸುಧಾರಣೆ ಕಾಯ್ದೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆ ವಿರೋಧಿಸಿ ರೈತಪರ ಮತ್ತು ಇತರೆ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಹಿನ್ನೆಲೆಯಲ್ಲಿ ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

Advertisement

ಯಾದಗಿರಿ ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕನ್ನಡಪರ, ರೈತಪರ, ದಲಿತಪರ ಸಂಘಟನೆಗಳ ಮುಖಂಡರು ಪ್ರತಿಭಟನಾ ರ್ಯಾಲಿ ಮೂಲಕ ಸುಭಾಶ್ಚಂದ್ರ ಬೋಸ್‌ ವೃತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡ ಮಲ್ಲಿಕಾರ್ಜುನ ಸತ್ಯಂಪೇಟ್‌ ಮಾತನಾಡಿ, ಸರ್ಕಾರ ರೈತರ ಮೇಲೆ ಮರಣ ಶಾಸನವನ್ನು ಹೇರುತ್ತಿವೆ ಎಂದು ಆಕ್ರೊಶ ವ್ಯಕ್ತಪಡಿಸಿದರು. ಸ್ವಾಮಿನಾಥನ್‌ ವರದಿ ಜಾರಿಗೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆದರೂ ಯಾವುದೇ ಸರ್ಕಾರಗಳು ಸ್ಪಂದಿಸಿಲ್ಲ. ಸರ್ಕಾರಕ್ಕೆ ರೈತರ ಕಲ್ಯಾಣ ಬೇಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ರೈತ ವಿರೋಧ ತಿದ್ದುಪಡಿ ಕಾಯ್ದೆ ಕೈಬಿಡಬೇಕೆಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕಾಗಮಿಸಿದ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಮನವಿ ಸ್ವೀಕರಿಸಿದರು. ಪ್ರಮುಖರಾದ ಡಾ| ಶರಣು ಬಿ.ಗದ್ದುಗೆ, ನಾಗರತ್ನ ವಿ.ಪಾಟೀಲ, ಮರೆಪ್ಪ ಚಿಟ್ಟರಕರ್‌, ಹನುಮೇಗೌಡ ಬೀರನಕಲ್‌, ಲಕ್ಷ್ಮೀಕಾಂತರೆಡ್ಡಿ ಎ.ಪಾಟೀಲ, ಸುಭಾಷ ಐಕೂರ, ನಾಗರತ್ನ ಮೂರ್ತಿ, ಮೈಲಾರಪ್ಪ ಜಾಗೀರದಾರ್‌, ಶರಣರೆಡ್ಡಿ ಹತ್ತಿಗೂಡೂರ ಸೇರಿ ಹಲವು ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಜೆಡಿಎಸ್‌ ಬೆಂಬಲ: ರೈತರ ಹೋರಾಟಕ್ಕೆ ಜೆಡಿಎಸ್‌ ಮುಖಂಡರು ಬೆಂಬಲಿಸಿ ಪಾಲ್ಗೊಂಡಿದ್ದರು. ಕಾಂಗ್ರೆಸ್‌ ಮುಖಂಡರು ನಗರದ ಗಾಂಧಿ ಪ್ರತಿಮೆ ಬಳಿ ಪ್ರತ್ಯೇಕ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸರ್ವ ಸಂಘಟನೆಗಳ ಹೋರಾಟಕ್ಕೆ ಬಾಹ್ಯ ಬೆಂಬಲ ನೀಡಿ ಕೆಲವು ಮುಖಂಡರು ಭಾಗವಹಿಸಿದ್ದರು. ಬಂದ್‌ಗೆ ಬೆಂಬಲಿಸಿ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದರು.

Advertisement

ಸಾರಿಗೆ ಸಂಚಾರ ಸ್ಥಗಿತ: ಕರ್ನಾಟಕ ಬಂದ್‌ ಹಿನ್ನೆಲೆ ಜಿಲ್ಲೆಯಲ್ಲಿ ಸಾರಿಗೆ ಸಂಚಾರ ಬೆಳಗ್ಗೆಯಿಂದಲೇ ಸ್ಥಗಿತಗೊಳಿಸಲಾಗಿತ್ತು.ಬೇರೆಡೆಯಿಂದ ಕೆಲವು ವಾಹನಗಳು ಆಗಮಿಸಿದ್ದವು. ಆದರೆ, ಜಿಲ್ಲೆಯಿಂದ ಯಾವುದೇ ವಾಹನಗಳು ಸಂಚರಿಸಲಿಲ್ಲ. ಕೆಲವು ಖಾಸಗಿ ಆಟೋಗಳು ನಗರ ಮತ್ತು ಗ್ರಾಮೀಣ ಭಾಗದ ಜನರನ್ನು ಕರೆ ತಂದಿದ್ದವು. ಎಲ್ಲ ಅಂಗಡಿಗಳನ್ನು ಮುಚ್ಚಿದ್ದರಿಂದ ಗ್ರಾಮೀಣ ಜನರು ಬಂದ ದಾರಿಗೆ ಸುಂಕುವಿಲ್ಲದಂತೆ ಹಿಂತಿರುಗಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next