Advertisement

ರಾಜ್ಯಪಾಲರ ನಡೆ ವಿರೋಧಿಸಿ ಪ್ರತಿಭಟನೆ

12:03 PM May 18, 2018 | Team Udayavani |

ಬೆಂಗಳೂರು: ರಾಜ್ಯಪಾಲ ವಜೂಭಾಯಿ ವಾಲಾ ಸಂವಿಧಾನಬಾಹೀರವಾಗಿ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಗುರುವಾರ ವಿಧಾನಸೌಧ ಪೂರ್ವ ಭಾಗದ ಮುಂಭಾಗದ ರಸ್ತೆಯಲ್ಲಿ ಭಾರೀ ಪ್ರತಿಭಟನೆ ನಡೆಸಿದರು.

Advertisement

ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸಿಎಂ ಯಡಿಯೂರಪ್ಪ ವಿಧಾನಸೌಧ ಪ್ರವೇಶಿಸುತ್ತಿದ್ದಂತೆ ಇತ್ತ ರಸ್ತೆಯಲ್ಲಿ ಜಮಾವಣೆಗೊಂಡ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಪ್ರತಿಭಟನೆಗೆ ಮುಂದಾದರು.

ಪ್ರಧಾನಿ ನರೇಂದ್ರಮೋದಿ, ರಾಜ್ಯಪಾಲರು, ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಸಂವಿಧಾನಬಾಹಿರವಾಗಿ ರಾಜ್ಯಪಾಲರು ನಡೆದುಕೊಂಡಿದ್ದಾರೆ. ಪ್ರಜಾಪ್ರಭುತ್ವಕ್ಕೆ ಅಪಮಾನ ಎಸಗಿದ್ದಾರೆ ಎಂದು ಆರೋಪಿಸಿದರು.

ನೂರಾರು ಮಂದಿ ಪ್ರತಿಭಟನಾಕಾರರು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದರಿಂದ ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸುವಂತಾಯಿತು. ಕೂಡಲೇ ಸ್ಥಳದಲ್ಲಿದ್ದ ಕೇಂದ್ರ ವಿಭಾಗದ ಡಿಸಿಪಿ ಚಂದ್ರಗುಪ್ತ ನೇತೃತ್ವದಲ್ಲಿ ಕಾರ್ಯಪ್ರವೃತ್ತಗೊಂಡ ಪೊಲೀಸರು, ಪ್ರತಿಭಟನಾಕಾರನನ್ನು ವಶಕ್ಕೆ ಪಡೆದುಕೊಂಡು ಕರೆದೊಯ್ದರು.

ಮತ್ತೂಂದೆಡೆ ಬಹುಮತ ಸಾಬೀತು ಪಡೆಸಲು ಅಗತ್ಯ ಶಾಸಕ ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಸರ್ಕಾರ ರಚನೆಗೆ ಅವಕಾಶ ನೀಡದೆ, 104 ಸ್ಥಾನ ಮಾತ್ರ ಹೊಂದಿರುವ ಬಿಜೆಪಿಗೆ ಅವಕಾಶ ನೀಡಿರುವ ರಾಜ್ಯಪಾಲರ ಕ್ರಮ ಸರಿಯಿಲ್ಲ ಎಂದು ಆರೋಪಿಸಿ ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್‌ ನೇತೃತ್ವದಲ್ಲಿ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.

Advertisement

ಮೆರವಣಿಗೆ ನಡೆಸಿದ ವಕೀಲರು ರಾಜ್ಯಪಾಲ ವಜೂಭಾಯಿವಾಲಾ ಗೋಬ್ಯಾಕ್‌, ಪ್ರಧಾನಿ ಮೋದಿಗೆ ಧಿಕ್ಕಾರ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾಕಾರರನ್ನು ರಾಜಭವನದ ಗೇಟ್‌ನಲ್ಲಿ ಪೊಲೀಸರು ತಡೆದರು.

ಈ ವೇಳೆ ಮಾತನಾಡಿದ ಪ್ರೊ. ರವಿವರ್ಮಕುಮಾರ್‌, ಸ್ಪಷ್ಟ ಬಹುಮತ ಸಾಬೀತಿಗೆ ಶಾಸಕ ಬಲ ಹೊಂದಿಲ್ಲದಿದ್ದರೂ ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿರುವ ರಾಜ್ಯಪಾಲರ ನಡೆ ಪ್ರಜಾತಂತ್ರದ ಕಗ್ಗೊಲೆ ಎಂದು ಆರೋಪಿಸಿದರು. 

ಇನ್ನು ಮುಂಜಾಗ್ರತಾ ಕ್ರಮವಾಗಿ ರಾಜಭವನ, ವಿಧಾನಸೌಧ, ವಿಕಾಸ ಸೌಧ ಸೇರಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಹೆಚ್ಚಿನ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ಡಿಸಿಪಿ ಸೇರಿ ಹಿರಿಯ ಪೊಲೀಸ್‌ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

ಲಾಠಿ ಬೀಸಿದ ಪೊಲೀಸರು: ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಿದ ರಾಜ್ಯಪಾಲರ ನಿರ್ಧಾರವನ್ನು ಖಂಡಿಸಿ ಕಾರ್ಯಕರ್ತರು ರಾಜಭವನ ಮುತ್ತಿಗೆಗೆ ಯತ್ನಿಸಿದರು. ಈ ಸಂದರ್ಭದಲ್ಲಿ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು.

ಮತ್ತೂಂದೆಡೆ ಯಡಿಯೂರಪ್ಪ ಅವರ ಅಧಿಕಾರ ಸ್ವೀಕಾರ ವಿರೋಧಿಸಿ ವಿಧಾನಸೌಧ ಹಿಂಭಾಗದ ಪ್ರವೇಶ ದ್ವಾರದ ಬಳಿ ಬೆಂಗಳೂರು ನಗರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌. ಪ್ರಕಾಶ್‌ ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕತ‌ìರು ಪ್ರತಿಭಟನೆ ನಡೆಸಿದರು. ಬೆಳಗ್ಗೆ 10 ಗಂಟೆಗೆ ಜಮಾಯಿಸಿದ ಕಾರ್ಯಕರ್ತರು, ಕೆಲಹೊತ್ತು ರಾಜ್ಯಪಾಲರು ಹಾಗೂ ಬಿಜೆಪಿ ನಾಯಕರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಗಾಂಧಿಪ್ರತಿಮೆ ಮುಂಭಾಗ ಪಕ್ಷದ ಶಾಸಕರು ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ತೆರಳಿದರು.

ಖಾಕಿಮಯ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರತಿಭಟನೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪೊಲೀಸರು, ಅಹಿತಕರ ಘಟನೆಗಳು ಸಂಭವಿಸಿದಂತೆ ತೀವ್ರ ನಿಗಾವಹಿಸಿದ್ದರು. ಇದರಿಂದ ರಾಜಭವನ ಬಳಿ ಕೇಸರಿ ಪಡೆಗಿಂತ ಖಾಕಿಧಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ರಾಜಭವನ ರಸ್ತೆ, ಚಾಲುಕ್ಯ ವೃತ್ತ ಹಾಗೂ ವಿಧಾನಸಭಾ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು. ಖುದ್ದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಬಿ.ಕೆ. ಸಿಂಗ್‌ ಭದ್ರತಾ ಉಸ್ತುವಾರಿ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next