Advertisement

ರಾಜ್ಯಪಾಲರ ಕ್ರಮ ಖಂಡಿಸಿ ಪ್ರತಿಭಟನೆ

05:59 PM May 19, 2018 | Team Udayavani |

ಚಿತ್ರದುರ್ಗ: ಸಂವಿಧಾನ ಬದ್ಧವಾಗಿ ಸರಳ ಬಹುಮತ ಇಲ್ಲದಿದ್ದರೂ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ಕ್ರಮ ಖಂಡಿಸಿ, ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ ಎಂದು
ಆಗ್ರಹಿಸಿ ಸಾಮಾಜಿಕ ಸಂಘರ್ಷ ಸಮಿತಿ, ಕರ್ನಾಟಕ ವಿದ್ಯಾರ್ಥಿ ಒಕ್ಕೂಟ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನಿವೃತ್ತ ನೌಕರರ ಒಕ್ಕೂಟದ ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಕೈಗಳಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರು.

Advertisement

ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಜೆಪಿ ಕಮಲಕರ್ತರಂತೆ ವರ್ತಿಸುತ್ತಿದ್ದಾರೆ. ಇಂತಹ ರಾಜ್ಯಪಾಲರಿಂದ ಕರ್ನಾಟಕ ರಾಜ್ಯದ ಒಳಿತು ಬಯಸುವುದು ದೊಡ್ಡ ತಪ್ಪಾಗಲಿದೆ. 117 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪತ್ರ ಸಲ್ಲಿಸಿದರೂ ಮೈತ್ರಿಕೂಟಕ್ಕೆ ಸರ್ಕಾರ ರಚಿಸಲು ಅವಕಾಶ ನೀಡುವ ಬದಲು ಪ್ರಧಾನಿ ಮೋದಿ ಅವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.

ಸರಳ ಬಹುಮತ ಇಲ್ಲದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿರುವುದು ಅಕ್ಷಮ್ಯ, ಸಂವಿಧಾನ ಬಾಹಿರ ಕ್ರಮ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಡೀ ಬಿಜೆಪಿ ನಡೆ ನೋಡಿದರೆ ಕುದುರೆ ವ್ಯಾಪಾರಕ್ಕೆ ಬಿಜೆಪಿ ನಾಯಕರು ಸಿದ್ಧರಿದ್ದಾರೆ ಇದು ಪ್ರಧಾನಿ ಮೋದಿ ಅವರ ಹೇಳಿಕೆಯಿಂದ ತಿಳಿಯಲಿದೆ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೋ ಅಥವಾ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯಲ್ಲಿದ್ದೇವೋ ತಿಳಿಯುತ್ತಿಲ್ಲ ಎಂದು ದೂರಿದರು.

ಗೋವಾದಲ್ಲಿ 2 ಸ್ಥಾನ ಗೆದ್ದ ಬಿಜೆಪಿ ಆಡಳಿತ ಮಾಡಬಹುದು, ಮೇಘಾಲಯ, ಬಿಹಾರ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಕಡಿಮೆ ಸೀಟು ಪಡೆದು ಬಿಜೆಪಿ ಮತ್ತು ಮೈತ್ರಿ ಕೂಟ ಆಡಳಿತ ಮಾಡಬಹುದು. ಆದರೆ, ಕರ್ನಾಟಕ ರಾಜ್ಯದಲ್ಲಿ ಕಡಿಮೆ ಸೀಟು ಪಡೆದವರು ಸರ್ಕಾರ ರಚಿಸುವುದು ಪ್ರಜಾಪ್ರಭುತ್ವದ ಕಗ್ಗೊಲೆಯೇ ಎಂದು ಪ್ರಶ್ನಿಸಿ, ಬಿಜೆಪಿ ಧೋರಣೆ ವಿರುದ್ಧ ಹೆಚ್ಚಿನ ಸೀಟು ಪಡೆದ ಆ ರಾಜ್ಯಗಳ ಪಕ್ಷಗಳಿಗೆ ಯಾಕೆ ಸರ್ಕಾರ ರಚಿಸಲು ಅವಕಾಶ ನೀಡಲಿಲ್ಲ. ಸಂವಿಧಾನವನ್ನು ತಮಗೆ ತಿಳಿದಂತೆ ಅರ್ಥೈಸಿಕೊಳ್ಳುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು ಎಂದು ಧಿಕ್ಕಾರ ಕೂಗಿದರು.

ಈ ಹಿಂದೆ ವಿಧಾನಸಭಾಧ್ಯಕ್ಷರಾಗಿ ಬೋಪಯ್ಯ ಸದನದ ಗೌರವ ಹಾಳು ಮಾಡಿದವರು. ನಾಳೆ ಇಂತಹ ವ್ಯಕ್ತಿಗಳಿಂದ
ಹೇಗೆ ನ್ಯಾಯ ಸಿಗಲು ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು. ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಯಡಿಯೂರಪ್ಪ ಅವರಿಗೆ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಕಾಶ ನೀಡಿರುವುದರ ಹಿಂದೆ ಬಿಜೆಪಿಗರಿಗೆ ಕುದುರೆ
ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡುವ ತಂತ್ರಗಾರಿಕೆ ಇದೆ. ಸುಪ್ರೀಂಕೋರ್ಟ್‌ ಇದನ್ನು ತೆಡೆದು ಮೇ 19ರಂದೇ ಬಹುಮತ ಸಾಬೀತು ಮಾಡುವಂತೆ ಆದೇಶ ಮಾಡಿರುವುದು ಸ್ವಲ್ಪ ಸಮಾಧಾನ ತರುವ ವಿಚಾರವಾಗಿದೆ. 

Advertisement

ಆದರೆ, ಬಿಜೆಪಿ ಸಂವಿಧಾನ ವಿರೋಧ ಕೃತ್ಯ ಎಸಗಲ್ಲ ಎನ್ನವುದು ಏನು ಖಚಿತ ಎಂದು ಪ್ರಶ್ನಿಸಿ ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳುವುದು ರಾಜ್ಯಪಾಲರ ಸ್ಥಾನದ ಘನತೆಗೆ ಅವಮಾನ ಮಾಡಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next