ಕಾರ್ಯಕರ್ತರು ಮಾಜಿ ಶಾಸಕ ಅಶ್ವಥ್‌ನಾರಾಯಣ್, ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜು, ರಾಜ್ಯ ಬಿಜೆಪಿ ಮುಖಂಡರಾದ ಕೌಟಿಲ್ಯ ರಘು, ಸಿಂಧುಘಟ್ಟ ಅರವಿಂದ್ ಮತ್ತಿತರರ ನೇತೃತ್ವದಲ್ಲಿ ಪಂಜುಗಳನ್ನು ಹಿಡಿದು ಪ್ರವಾಸಿ ಮಂದಿರ ವೃತ್ತದಿಂದ ದುರ್ಗಾಭವನ್ ವೃತ್ತದವರೆಗೆ ಬೃಹತ್
ಜಾಥಾದೊಂದಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮೆರವಣಿಗೆ ಬಳಿಕ ದುರ್ಗಾಭವನ್ ವೃತ್ತದಲ್ಲಿ ನಡೆದ ಬಹುರಂಗ ಸಭೆಯಲ್ಲಿ ಮಾಜಿ ಶಾಸಕ ಅಶ್ವಥ್‌ನಾರಾಯಣ್ ಮಾತನಾಡಿ, ಯಡಿಯೂರಪ್ಪಮೇಲೆ ವಜಾಗೊಂಡಿರುವ ಕೇಸನ್ನು ಎಸಿಬಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಮರು ಜೀವ ನೀಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಎಸಿಬಿ ದುರ್ಬಳಕೆ: ಇದಕ್ಕೂ ಮೊದಲೆ ಸಿದ್ಧರಾಮಯ್ಯ ಹಾಗೂ ಅವರ ಮಗ ಡಾ.ಯತೀಂದ್ರ ಮೇಲೆ 19ಕ್ಕೂ ದೂರುಗಳು ಎಸಿಬಿಯಲ್ಲಿ ದಾಖಲಾಗಿವೆ. ಸಚಿವ ಮಹಾದೇವಪ್ಪ ಪುತ್ರ ಅಧಿಕಾರಿಯೊಬ್ಬರಿಗೆ ಲಂಚದ ಆಮಿಷ ಒಡ್ಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲಾ ಪ್ರಕರಣಗಳನ್ನು ಮುಚ್ಚಿಟ್ಟು ಬಿಜೆಪಿ ನಾಯಕ ಯಡಿಯೂರಪ್ಪಮೇಲೆ ಸುಳ್ಳು ಪ್ರಕರಣ ದಾಖಲಿಸಲು ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಲೋಕಯುಕ್ತ ಭ್ರಷ್ಟರಿಗೆ ಸಿಂಹಸ್ವಪ್ನವಾಗಿತ್ತು. ಅದಕ್ಕೆ ಎಳ್ಳುನೀರು ಬಿಟ್ಟು, ಎಸಿಬಿ ಎಂಬ ಕೈಗೊಂಬೆಯನ್ನು ಸ್ಥಾಪಿಸಿಕೊಂಡು ಭ್ರಷ್ಟಾಚಾರಕ್ಕೆ ಮುಖ್ಯಮಂತ್ರಿ ಸೇರಿದಂತೆ ಹಲವು ಸಚಿವರು ಅವಕಾಶ ಮಾಡಿಕೊಂಡಿದ್ದಾರೆ ಎಂದು ದೂರಿದರು. ಎಸಿಬಿ ರದ್ದುಪಡಿಸಿ: ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಮಾಡಲು ಅವಕಾಶವಾಗದ ಕಾರಣ ತಮ್ಮ ಅಣತಿಯಂತೆ ಕುಣಿಯುವ
ಎಸಿಬಿಯನ್ನು ರಚಿಸಿಕೊಂಡು ಭ್ರಷ್ಟಾಚಾರಕ್ಕೆ ಅಡಿಪಾಯ ಹಾಕಿದ್ದಾರೆ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ವಿರೋಧ ಪಕ್ಷದ ಸ್ಥಾನವನ್ನೂ ನೀಡದೆ ಹೀನಾಯವಾಗಿ ಸೋಲಿಸಲಿದ್ದಾರೆ. ಸಿದ್ದರಾಮಯ್ಯಗೆ ತಾಕತಿದ್ದರೆ ಕೂಡಲೇ ಎಸಿಬಿ ರದ್ದು ಪಡಿಸಿ ಲೋಕಾಯುಕ್ತ
ಸಂಸ್ಥೆಯನ್ನು ಬಲಪಡಿಸಲಿ ಎಂದು ಅಶ್ವತ್‌ನಾರಾಯಣ್ ಸವಾಲು ಹಾಕಿದರು. ಜಿಲ್ಲೆಗೆ ಅನ್ಯಾಯ: ಕೆಆರ್‌ಎಸ್‌ನಲ್ಲಿ 100 ಅಡಿ ನೀರು ತುಂಬಿದೆ. ಆದರೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡ್ಯ ರೈತರಿಗೆ ನೀರು ಬಿಡದೆ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಇಂತಹ ಕೆಟ್ಟ ರಾಜಕಾರಣಿಯನ್ನು ರಾಜ್ಯದ ಜನತೆ ಇತಿಹಾಸದಲ್ಲಿಯೇ ನೋಡಿಲ್ಲ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ರಾಜ್ಯ ಸ್ಲಂ ಮೋರ್ಚಾ ಅಧ್ಯಕ್ಷ ಕೌಟಿಲ್ಯ ರಘು, ತಾಲೂಕು ಅಧ್ಯಕ್ಷ ಬೂಕಹಳ್ಳಿ ಮಂಜು, ಜಿಲ್ಲಾ ಉಪಾಧ್ಯಕ್ಷ ವರದರಾಜೇಗೌಡ, ಬ್ಯಾಂಕ್ ಪರಮೇಶ್, ತೋಟಪ್ಪಶೆಟ್ಟಿ, ಕುಮಾರಸ್ವಾಮಿ, ಪಾರ್ಥಸಾರಥಿ,
ತಾಲೂಕು ಯುವ ಮೋರ್ಚಾ ಅಧ್ಯಕ್ಷ ಹೊಸಹೊಳಲು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಹರೀಶ್, ಖಜಾಂಚಿ ಸಾಸಲು ನಾಗೇಶ್, ತಾಲೂಕು ಉಪಾಧ್ಯಕ್ಷ ಸಿದ್ದೇಶ್ ಮೊದಲಾದವರು ಭಾಗವಹಿಸಿದ್ದರು.
Advertisement