Advertisement

ಈಶ್ವರಪ್ಪ ವಿರುದ್ದ ಆರೋಪ ಖಂಡಿಸಿ ಪ್ರತಿಭಟನೆ

12:53 PM Apr 27, 2022 | Team Udayavani |

ಚಿಂಚೋಳಿ: ಕರ್ನಾಟಕ ರಾಜ್ಯದ ಹಿಂದುಳಿದ ಧೀಮಂತ ನಾಯಕ ಕೆ.ಎಸ್‌. ಈಶ್ವರಪ್ಪ ಮೇಲೆ ಕಾಂಗ್ರೆಸ್‌ ಪಕ್ಷದವರು ಮಾಡುತ್ತಿರುವ ಸುಳ್ಳು ಆರೋಪವನ್ನು ಖಂಡಿಸಿ ತಾಲೂಕು ಹಿಂದುಳಿದ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

Advertisement

ಕಾಡಾ ಅಧ್ಯಕ್ಷ ಶರಣಪ್ಪ ತಳವಾರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ, ಕರ್ನಾಟಕದ ಹಿಂದುಳಿದ ವರ್ಗದ ಧೀಮಂತ ನಾಯಕ ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಶೋಷಿತರ ಧ್ವನಿ ನಿಷ್ಕಳಂಕಿ ರಾಜಕಾರಣಿ. ಬಿಜೆಪಿ ಆಧಾರ ಸ್ತಂಭ ಆಗಿದ್ದ ಅವರ ಮೇಲೆ ಕಾಂಗ್ರೆಸ್ ಪಕ್ಷದ ಮುಖಂಡರು ಬೆಳಗಾವಿ ಜಿಲ್ಲೆಯ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಸುಳ್ಳು ಆರೋಪ ಮಾಡುತ್ತಿರುವುದಕ್ಕೆ ಹಿಂದುಳಿದ ಸಮುದಾಯದ ಪಕ್ಷದ ನಾಯಕರು, ಕಾರ್ಯಕರ್ತರಿಗೆ ಮುಜುಗರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಹೈಕಮಾಂಡ ಒತ್ತಡ ಇಲ್ಲದಿದ್ದರೂ ಸ್ವಾಭಿಮಾನ, ಸ್ವ-ಇಚ್ಚೆಯಿಂದ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ರಾಜೀನಾಮೆಯಿಂದ ಹಿಂದುಳಿದ ವರ್ಗಗಳ ಕಾರ್ಯಕರ್ತರಿಗೆ ಭಾರಿ ನಷ್ಟವನ್ನುಂಟು ಮಾಡಿದೆ ಎಂದರು.

ಮುಖಂಡ ಧರ್ಮಣ್ಣ ದೊಡ್ಡಮನಿ ಮಾತನಾಡಿ, ಕೆ.ಎಸ್‌.ಈಶ್ವರಪ್ಪನವರು ರಾಜ್ಯದ ಮೂಲೆ ಮೂಲೆಗೆ ತೆರಳಿ ಹಿಂದುಳಿದ ಜನಾಂಗವನ್ನು ಒಂದುಗೂಡಿಸಿ ತಮ್ಮದೇ ತಂಡವನ್ನು ಕಟ್ಟಿಕೊಂಡು ಹಿಂದುಳಿದ ಸಮುದಾಯವನ್ನು ಬಿಜೆಪಿ ಕಡೆ ನಿಲ್ಲುವಂತೆ ಮಾಡಿದ್ದಾರೆ. ಅವರ ಮೇಲಿನ ಆರೋಪ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ ಎಂದರು.

ಪ್ರತಿಭಟನೆಯಲ್ಲಿ ಸುರೇಶ ವೈದ್ಯರಾಜ ಕುಪನೂರ, ಲಕ್ಷ್ಮಣ ಆವಂಟಿ, ಶ್ರೀಮಂತ ಕಟ್ಟಿಮನಿ, ಶಿವಕುಮಾರ ಪೋಚಾಲಿ, ಚಂದ್ರಶೇಖರ ಗುತ್ತೇದಾರ ಮಾತನಾಡಿದರು.

Advertisement

ಬಿಜೆಪಿ ಮುಖಂಡರಾದ ಶ್ರೀನಿವಾಸ ಘಾಲಿ, ಮಾಳಪ್ಪ ಅಪ್ಪೋಜಿ, ಶರಣು ಪೂಜಾರಿ, ಮಲ್ಲಿಕಾರ್ಜುನ ಮರಗುತ್ತಿ, ಜಗನ್ನಾಥ ತೇಲಿ, ಶರಣು ನಾಟೀಕಾರ, ಮಲ್ಲಿಕಾರ್ಜುನ ರಾಯಗೊಂಡ, ಮೊಗಲಪ್ಪ ಕರಕಟ್ಟಿ, ಕೃಷ್ಣಪ್ಪ ಪೂಜಾರಿ, ಸುಧಾಕರ ಮಿರಿಯಾಣ, ಬಸವರಾಜ, ತುಳಜಪ್ಪ ಪೂಜಾರಿ, ರವಿ ಗೊಲ್ಲಾ, ರಮೇಶ ತೇಲಿ, ಜರಣಪ್ಪಾ ಪೂಜಾರಿ, ಹಣಮಂತ ಹಿರೇಮನಿ ಇನ್ನಿತರರಿದ್ದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಕಂದಾಯ ಇಲಾಖೆ ಶಿರಸ್ತೇದಾರ ಸುಭಾಷ ಸುಲೇಪೇಟ ಅವರಿಗೆ ಸಲ್ಲಿಸಲಾಯಿತು.

ಪಟ್ಟಣದ ಕನಕದಾಸ ಚೌಕ್‌ನಿಂದ ತಹಶೀಲ್ದಾರ್‌ ಕಚೇರಿ ವರೆಗೆ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಸುಲೇಪೇಟ,ನಿಡಗುಂದಾ, ಕೋಡ್ಲಿ, ಚಿಂಚೋಳಿ, ಕುಂಚಾವರಂ ಗ್ರಾಮಗಳ ಬಿಜೆಪಿ ಹಿಂದುಳಿದ ವರ್ಗಗಳ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next