Advertisement
ಕರ್ಣಿ ಸೇನಾ ಎನ್ನುವ ರಜಪೂತ ಸಂಘಟನೆಯೊಂದು ಪದ್ಮಾವತಿ ಚಿತ್ರದ ಬಿಡುಗಡೆಯನ್ನು ತಡೆಯಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಚಿತ್ರ ಬಿಡುಗಡೆಯಾಗಲಿರುವ ಡಿ. 1ರಂದು ಭಾರತ ಬಂದ್‌ಗೆ ಕೂಡ ಈ ಸಂಘಟನೆ ಕರೆ ನೀಡಿದೆ. ಬಹುಶಃ ಸಿನೆಮಾ ವಿವಾದವೊಂದು ಭಾರತ ಬಂದ್‌ಗೆ ಕಾರಣವಾದದ್ದು ಇದೇ ಮೊದಲಿರಬೇಕು. ಒಂದು ದೊಡ್ಡ ಸಮುದಾಯದ ಭಾವನೆಗಳನ್ನು ನೋಯಿಸುವ ಅಂಶಗಳಿರುವ ಚಿತ್ರವನ್ನು ವಿರೋಧಿಸುವ ಹಕ್ಕು ಕರ್ಣಿ ಸೇನೆ ಅಥವಾ ಇನ್ಯಾವುದೇ ಸಂಘಟನೆಗಿದೆ. ಆದರೆ ಪ್ರತಿಭಟಿಸುವ ಆವೇಶದಲ್ಲಿ ನಾಯಕಿಯ ಮೂಗು ಕತ್ತರಿಸಲು, ನಿರ್ದೇಶಕರ ರುಂಡ ಕತ್ತರಿಸಲು ಬಹುಮಾನ ಘೋಷಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಸೂಕ್ತವಾಗುವ ನಡೆಯಲ್ಲ. ಪ್ರತಿಭಟನೆ ಎಂದಿಗೂ ಪ್ರಜಾಪ್ರಭುತ್ವದ ಚೌಕಟ್ಟಿನೊಳಗಿರಬೇಕು. ಆದರೆ ಕರ್ಣಿ ಸೇನೆಯಂತಹ ಹತ್ತಾರು ಸೇನೆಗಳು ಹಿಂಸೆಯನ್ನೇ ಪ್ರತಿಭಟನೆಯ ಪ್ರಬಲ ಅಸ್ತ್ರವಾಗಿ ಬಳಸುತ್ತಿರುವುದು ಕಳವಳಕಾರಿ ವಿಚಾರ. ರಾಜಕೀಯವಾಗಿಯೂ ಈ ವಿವಾದ ಬಹಳ ಮಹತ್ವ ಪಡೆದುಕೊಂಡಿದೆ. ಮಧ್ಯಪ್ರದೇಶ ಸರಕಾರವೇ ಚಿತ್ರವನ್ನು ನಿಷೇಧಿಸಿದರೆ, ಉತ್ತರ ಪ್ರದೇಶದಲ್ಲಿ ಚಿತ್ರ ಬಿಡುಗಡೆಯಾಗಲು ಅವಕಾಶ ಕೊಡುವುದಿಲ್ಲ ಎಂದು ಅಲ್ಲಿನ ಉಪಮುಖ್ಯಮಂತ್ರಿ ಹೇಳಿದ್ದಾರೆ. ರಾಜಸ್ಥಾನ ಸರಕಾರ ಚಿತ್ರದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳನ್ನು ಕಿತ್ತು ಹಾಕಬೇಕೆಂದು ಕೇಂದ್ರಕ್ಕೆ ಪತ್ರ ಬರೆದಿದೆ. ಇವೆಲ್ಲ ಬಿಜೆಪಿ ಆಳ್ವಿಕೆಯಿರುವ ರಾಜ್ಯಗಳಾದರೆ ಕಾಂಗ್ರೆಸ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ರಜಪೂತರ ಭಾವನೆಗಳನ್ನು ನೋಯಿಸುವ ಚಿತ್ರ ಬಿಡುಗಡೆಯಾಗುವುದು ಬೇಡ ಎಂದಿದ್ದಾರೆ. ಇನ್ನೂ ಕೆಲವು ಕಾಂಗ್ರೆಸ್ ನಾಯಕರು ಪದ್ಮಾವತಿಯ ವಿರುದ್ಧ ಮಾತನಾಡಿದ್ದಾರೆ. ಈ ಒಂದು ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಹಮತ ಏರ್ಪಟ್ಟಿರುವುದು ಆಶ್ಚರ್ಯವುಂಟು ಮಾಡುತ್ತದೆ. ಬಹುಶಃ ಸದ್ಯದಲ್ಲೇ ನಡೆಯಲಿರುವ ಗುಜರಾತ್ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯುವ ಇನ್ನುಳಿದ ಕೆಲ ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಹುಸಂಖ್ಯಾಕರ ವಿರೋಧ ಕಟ್ಟಿಕೊಳ್ಳುವುದನ್ನು ತಡೆಯಲು ರಕ್ಷಣಾತ್ಮಕ ಆಟ ಆಡುತ್ತಿರುವಂತೆ ಕಾಣಿಸುತ್ತದೆ.
Advertisement
ಪ್ರಜಾಪ್ರಭುತ್ವದ ಚೌಕಟ್ಟಿನೊಳಗಿರಲಿ ಪ್ರತಿಭಟನೆ: ಪದ್ಮಾವತಿ ವಿವಾದ
07:31 AM Nov 21, 2017 | |
Advertisement
Udayavani is now on Telegram. Click here to join our channel and stay updated with the latest news.