ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮ ನೇಮಕಾತಿ ಮತ್ತು ಕಟ್ಟಡ ಕಾಮಗಾರಿಗಳಿಗೆ ದುಂದುವೆಚ್ಚಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಮೈಸೂರು ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಕ್ರಾರ್ಫರ್ಡ್ ಹಾಲ್ ಎದುರು ಜಮಾಯಿಸಿದ ಸಮಿತಿ ಪದಾಧಿಕಾರಿಗಳು, ಮೂರೂವರೆ ವರ್ಷಗಳಿಂದ ಮೈಸೂರು ವಿವಿ ಕುಲಪತಿಗಳಾಗಿ ಆಡಳಿತ ನಡೆಸುತ್ತಿರುವ ಪ್ರೊ.ಜಿ. ಹೇಮಂತ್‌ಕುಮಾರ್ ಅವರು ಶೈಕ್ಷಣಿಕವಾಗಿ ವಿವಿಯನ್ನುಮೇಲೆತ್ತಲು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯದಲ್ಲಿ ಪೂರ್ಣ ಕಾಲಿಕ ಬೋಧಕ ಹುದ್ದೆಗಳನ್ನು ಭರ್ತಿ ಮಾಡದೆ ಮತ್ತು ಬ್ಯಾಕ್ ಲಾಗ್ ಹುದ್ದೆಗಳು ಖಾಲಿಇದ್ದರೂ ಅವುಗಳನ್ನು ಸಹ ಭರ್ತಿ ಮಾಡದೇ,ಸಂಶೋಧನೆ ಗಳಿಗೆ ಹೆಚ್ಚಿನ ಹಣಕಾಸು ನಿಗದಿಪಡಿಸದೇ ಕೇವಲ ಹೊಸ ಕಟ್ಟಡಗಳ ಕಾಮಗಾರಿ, ಸುಸ್ಥಿತಿಯಲ್ಲಿರುವ ಕಟ್ಟಡಗಳ ನವೀಕರಣ, ಅನಾವಶ್ಯಕ ಸಾಧನ ಸಾಮಗ್ರಿಗಳ ಖರೀದಿ, ಮುಂತಾದ ಹಲವುಶೈಕ್ಷಣಿಕೇತರ ಚಟುವ ಟಿಕೆಗಳಿಗೆ ಕೋಟ್ಯಂತರ ರೂ. ವಿನಿಯೋಗಿಸಿ ವಿವಿ ಹಣ ಪೋಲು ಮಾಡುತ್ತಿದ್ದಾರೆಂದು ಆರೋಪಿಸಿದರು.
ಮೈಸೂರು ವಿವಿ ಹಾಸ್ಟೆಲ್ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ 500 ರೂಮುಗಳನ್ನು ಒಳಗೊಂಡಿರುವ ಎರಡು ಹೊಸ ಹಾಸ್ಟೆಲ್ ಸ್ಥಾಪಿಸಬೇಕು. ಅತಿಥಿ ಉಪನ್ಯಾಸಕರ ಹುದ್ದೆಯನ್ನು ಪೂರ್ಣಕಾಲಿಕವಾಗಿ ಪ್ರತಿವರ್ಷ ಭರ್ತಿ ಮಾಡಿ ಯುಜಿಸಿ ನಿಯಮದಂತೆ ಕನಿಷ್ಠ 50 ಸಾವಿರರೂ. ವೇತನ ನಿಗದಿಪಡಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಾಮಾಜಿಕ ನ್ಯಾಯಪರ ವೇದಿಕೆಯ ಸಂಚಾಲಕ ಮರಡೀಪುರ ರವಿಕುಮಾರ್,ಕರ್ನಾಟಕ ರಾಜ್ಯ ಸಂಶೋಧಕರ ಸಂಘದ ಅಧ್ಯಕ್ಷಎಸ್.ಮರಿದೇವಯ್ಯ, ಆರ್.ಲಕ್ಷ್ಮಣ್, ಡಾ.ಹರೀಶ್ ಕುಮಾರ್, ಶಶಿಕುಮಾರ್, ಪರಂಜ್ಯೋತಿ, ಮನು ಕುಮಾರ್, ಅಶೋಕ್ ಪೂಜಾರಿ ಭಾಗವಹಿಸಿದ್ದರು.