Advertisement

ಎಚ್.ಟಿ. ಮಂಜು ವಜಾ ನೋಟಿಸ್ ಖಂಡಿಸಿ ಪ್ರತಿಭಟನೆ

04:39 PM Sep 20, 2019 | Team Udayavani |

ಪಾಂಡವಪುರ: ಮನ್‌ಮುಲ್‌ ನಿರ್ದೇಶಕರಾಗಿ ಆಯ್ಕೆಯಾಗಿರುವ ಕೆ.ಆರ್‌.ಪೇಟೆ ತಾಲೂಕಿನ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಚ್‌.ಟಿ.ಮಂಜು ಅವರನ್ನು ವಜಾ ಗೊಳಿಸಲು ನೋಟಿಸ್‌ ನೀಡಿರುವವರ ವಿರುದ್ಧ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಪಟ್ಟಣದ ಸಹಕಾರಿ ಸಂಘ ಗಳ ಸಹಾಯ ನಿಬಂಧಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಎದುರು ಜಮಾಯಿಸಿದ ಜೆಡಿಎಸ್‌ ಪುರಸಭೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮನ್‌ಮುಲ್‌ ನಿರ್ದೇಶಕ ಎಚ್‌.ಟಿ.ಮಂಜು ಕೆ.ಆರ್‌.ಪೇಟೆ ತಾಲೂಕಿನ ಹರಳಹಳ್ಳಿ ಹಾಲು ಡೇರಿಯಲ್ಲಿ 180 ದಿನ ಹಾಲು ಪೂರೈಸಿದ ಬಳಿಕ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿ 54 ತಿಂಗಳು ಪೂರೈಸಿದ್ದಾರೆ.

ಇದೀಗ ಮನ್‌ಮುಲ್‌ ನಿರ್ದೇಶಕ ಸ್ಥಾನಕ್ಕೂ ಆಯ್ಕೆಯಾಗಿದ್ದಾರೆ. ಅಪರ ಜಿಲ್ಲಾಧಿಕಾರಿಗಳೇ ನಾಮಪತ್ರದ ದಾಖಲೆಗಳು ಪರಿಶೀಲಿಸಿ ನಾಮಪತ್ರ ಸರಿಯಾಗಿದೆ ಎಂದು ಘೋಷಿಸಿದ್ದಾರೆ. ಆದರೆ, ಮಂಜು ಅವರದ್ದು ಅಕ್ರಮ ಆಯ್ಕೆ ಎಂದು ಸಹಕಾರ ಸಂಘಗಳ ಸಹಾಯ ನಿಬಂಧಕರು ನೋಟಿಸ್‌ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು. ಮನ್‌ಮುಲ್‌ ಅಧ್ಯಕ್ಷ ಸ್ಥಾನಕ್ಕೆ ಸೆ.23 ಅಧ್ಯಕ್ಷರ ಚುನಾವಣೆ ನಡೆಯಲಿದ್ದು, ಇದೀಗ ಸಹಕಾರ ಸಂಘಗಳ ಸಹಾಯ ನಿಬಂಧಕರು ರಾಜಕೀಯ ಒತ್ತಡಕ್ಕೆ ಮಣಿದು ಎಚ್‌.ಟಿ.ಮಂಜು ಅವರಿಗೆ ನೀವು 180 ದಿನ ಹಾಲು ಸರಬರಾಜು ಮಾಡಿರುವುದಕ್ಕೆ ದಾಖಲೆಗಳಿಲ್ಲ, ಸರ್ಕಾರದ ಪ್ರೋತ್ಸಾಹ ಹಣ ಪಡೆದಿಲ್ಲ. ಅಕ್ರಮವಾಗಿ ನಿರ್ದೇಶಕರಾಗಿದ್ದೀರೆಂದು ನೋಟಿಸ್‌ ನೀಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಅಶೋಕ್‌, ಮನ್‌ಮುಲ್‌ ಮಾಜಿ ಅಧ್ಯಕ್ಷ ಕೆ.ವೈರಮುಡಿಗೌಡ, ಟಿಎಪಿಸಿಎಂಎಸ್‌ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ತಾಲೂಕು ಪಂಚಾಯಿತಿ ಸದಸ್ಯ ನಿಂಗೇಗೌಡ, ದೇಶವಳ್ಳಿ ಪ್ರಭಾಕರ್‌, ಬಲರಾಮು, ಚಲುವರಾಜು, ಚೇತನ್‌, ಪುರಸಭಾ ಸದಸ್ಯರಾದ ಗಿರೀಶ್‌, ಬಾಬು ಮೊದಲಾದವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next