ಜಮಖಂಡಿ: ಕೇಂದ್ರೀಯ ಕಾರ್ಮಿಕ ಸಂಘಟನೆ, ಫೆಡರೇಶನ್‌ದ ಮತ್ತು ಆಲ್ ಇಂಡಿಯಾ ಟ್ರೇಡ್ ಯುನಿಯನ್ ಸೆಂಟರ್ (ಎಐಯುಟಿಯುಸಿ) ಕಾರ್ಯಕರ್ತರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ, ಜನ-ವಿರೋಧಿ ಹಾಗೂ ಕಾರ್ಪೊರೇಟ್ ಪರ ನೀತಿ ಹಿಂಪಡೆಯಲು ಒತ್ತಾಯಿಸಿ ಅಖೀಲ ಭಾರತ ಸಾರ್ವತ್ರಿಕ ಮುಷ್ಕರ, ಪ್ರತಿಭಟನೆ ನಡೆಸಿದರು. ನಗರದ ತಾಲೂಕು ಆಡಳಿತ ಸೌಧ ಆವರಣದಲ್ಲಿ ಸೋಮವಾರ ಆಲ್ ಇಂಡಿಯಾ ಟ್ರೇಡ್ ಯುನಿಯನ್ ಸೆಂಟರ್ (ಎಐಯುಟಿಯುಸಿ) ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ್ ಜಿ.ಸತೀಶಕುಮಾರ್‌ಗೆ ಮನವಿ ಸಲ್ಲಿಸಿ ಮಾತನಾಡಿದರು.
ನಮ್ಮ ಸಂಘಟನೆ ಸಹಿತ 10 ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಫೆಡರೇಷನ್‌ಗಳು ಕೇಂದ್ರ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೇಶಾದ್ಯಂತ ತೀವ್ರ ಹೋರಾಟ ಮಾಡುತ್ತಿದೆ. ಆದರೆ, ಕೇಂದ್ರ ಸರ್ಕಾರ ದೇಶದ ಕಾರ್ಮಿಕ ವರ್ಗದ ಪ್ರಮುಖ ಬೇಡಿಕೆಗಳನ್ನು ಮಾನ್ಯತೆ ನೀಡುತ್ತಿಲ್ಲ.
ಸಾರ್ವಜನಿಕ ವಲಯದ ಮತ್ತು ಸರ್ಕಾರಿ ವಲಯದ ಉದ್ದಿಮೆಗಳ ಖಾಸಗೀಕರಣ ಮಾಡುತ್ತಿದೆ. ರೈಲ್ವೆ, ಭದ್ರತಾ ವಲಯ, ವಿದ್ಯುತ್, ಬ್ಯಾಂಕಿಂಗ್, ಕಲ್ಲಿದ್ದಲು, ಪೆಟ್ರೋಲಿಯಂ, ಉಕ್ಕು, ವಿವಿಧ ಸಾರಿಗೆ ಸಹಿತ ಇತ್ಯಾದಿ ವಲಯಗಳಿವೆ.
ಸೀಮಿತ ಅವಧಿಯ ಉದ್ಯೋಗ ನೀತಿಯಿಂದಾಗಿ ಕಾಯಂ ಉದ್ಯೋಗಗಳು ಮಾಯವಾಗಲಿವೆ. ಶೇ. 70 ಗಿಂತಲೂ ಹೆಚ್ಚು ಕಾರ್ಮಿಕರು ಮತ್ತು ಶೇ. 74 ಕೈಗಾರಿಕೋದ್ಯಮಗಳು ಕಾಯ್ದೆಯ ವ್ಯಾಪ್ತಿಯಿಂದ ಹೊರಗೆ ಉಳಿಯಲಿವೆ. ಕೃಷಿ ಉತ್ಪನ್ನಗಳಿಗೆ ಯಾವುದೇ ಕನಿಷ್ಟ ಬೆಂಬಲ ಬೆಲೆ ನೀಡುತ್ತಿಲ್ಲ. ಅಗತ್ಯ ವಸ್ತುಗಳ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ. ಐಎಲ್‌ಸಿ ಶಿಫಾರಸಿನಂತೆ ಕಾರ್ಯಕರ್ತೆಯರನ್ನು ಕಾರ್ಮಿಕ ರೆಂದು ಪರಿಗಣಿಸಿ, ಕನಿಷ್ಠ 25 ಸಾವಿರ ಮಾಸಿಕ ವೇತನ ಜಾರಿ ಮಾಡಬೇಕು. ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು.
ಗುತ್ತಿಗೆ ಹೊರಗುತ್ತಿಗೆ ಸಹಿತ ಎಲ್ಲಾ ಅನೌಪಚಾರಿಕ ವಲಯದ ಕಾರ್ಮಿಕರಿಗೆ ಯೋಗ್ಯ ವೇತನ, ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡಬೇಕು. ಅಂಗನವಾಡಿ, ಆಶಾ, ಬಿಸಿಯೂಟ ಸಹಿತ ಇತರೇ ಕಾರ್ಮಿಕರಿಗೆ ಶಾಸನಬದ್ಧ ಕನಿಷ್ಠ ವೇತನ ನೀಡಬೇಕು.
ಎಐಯುಟಿಯುಸಿ ಸಂಘದ ಸಂಘಟನಾಕಾರರಾದ ಅಂಜನಾ ಕುಂಬಾರ, ಸುನಿತಾ ಜಂಬಗಿ, ಕಸ್ತೂರಿ ಅಂಗಡಿ, ವಿ.ಜಿ. ಕಡಕೋಳ, ಕೆ.ಡಿ.ಕೊಣ್ಣೂರ, ಎಂ.ಎ. ಸರಿಕಾರ, ಬಿ.ಎ. ಹಾಸೀಲಕರ, ಎಸ್ .ಪಿ.ಸರವಗೋಳ, ಜಿ.ಆರ್.ರಾವಳ, ಎ.ಸಿ.ದಲಾಲ, ಎಸ್.ಎಲ್.ಕುಂಬಾರ, ಎಂ.ಪಿ.ಮುಳಿಕ, ಎಂ.ಎ. ಗುಣದಾಳ, ಆರ್.ಐ.ಅಂಬಿ, ಎ.ಎಸ್.ಹಿರೇಮಠ, ಸಿ.ಎಸ್.ನ್ಯಾಮಗೌಡ, ವಿ.ಕೆ. ದೈಗೊಂಡ, ಕೆ.ಎಂ.ಗುಡದಿನ್ನಿ, ಎಸ್.ಎಂ. ಇಲಕಲ್ ಇದ್ದರು.