ಕಡಬ: ಬಣ್ಣದ ಮಾತು ಗಳನ್ನಾಡಿ ಜನರಿಗೆ ಮೋಡಿ ಮಾಡಿ ಅಧಿಕಾರಕ್ಕೇರಿದ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶವನ್ನೇ ಮಾರಾಟ ಮಾಡಲು ಮುಂದಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳಿಂದಾಗಿ ಜನರು ದಂಗೆ ಏಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರವು ರೈತ ವಿರೋಧಿಯಾಗಿ ಆಡಳಿತ ನಡೆಸುತ್ತಿದೆ ಎಂದು ಕಡಬ ಸರ್ವ ಪಕ್ಷಗಳ ಒಕ್ಕೂಟದ ಸಂಚಾಲಕ, ಕಡಬ ತಾಲೂಕು ಜೆಡಿಎಸ್ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಹೇಳಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕಡಬದ ಸರ್ವ ಪಕ್ಷಗಳ ಒಕ್ಕೂಟ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಮಂಗಳವಾರ ಕಡಬ ಪೇಟೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ಎಸ್‌ಡಿಪಿಐ ಮುಖಂಡ ಆನಂದ ಮಿತ್ತಬೈಲ್ ಮಾತನಾಡಿ, ಹಿಟ್ಲರ್ ಮಾದರಿ ಆಡಳಿತ ದೇಶದಲ್ಲಿದೆ. ರಾಮನ ಹೆಸರು ಮತ್ತು ಧರ್ಮದ ಅಫೀಮನ್ನು ಜನರಿಗೆ ತಿನ್ನಿಸಿ ಅಧಿಕಾರ ಪಡೆದಿರುವ ಅವರು ಮುಂದಿನ ಚುನಾವಣೆಗಾಗಿ ಹಣ ಕ್ರೋಢೀಕರಿಸುವುದಕ್ಕಾಗಿ ದೇಶದ ಜನರನ್ನು ಸುಲಿಗೆ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ಕಾರ್ಯದರ್ಶಿ ಜಾಕೆ ಮಾಧವ ಗೌಡ ಮಾತನಾಡಿ, ಚಹಾ ಮಾರುತ್ತಿದ್ದ ಮೋದಿ ಪ್ರಧಾನಿಯಾದ ಮೇಲೆ ದೇಶವನ್ನೇ ಅದಾನಿ, ಅಂಬಾನಿಗೆ ಮಾರಾಟ ಮಾಡುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಲೇ ಇದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಡೆ ಮಾತನಾಡಿದರು. ಎಸ್‌ಡಿಪಿಐ ಮುಖಂಡರಾದ ಹಾರಿಸ್ ಕಳಾರ, ನಬಿ ಶಾನ್, ನೌಶಾದ್ ಕಡಬ, ಜೆಡಿಎಸ್ ಮುಖಂಡರಾದ ಚಂದ್ರಶೇಖರ ಗೌಡ ಕೋಡಿಬೈಲು, ಸುಂದರ ಗೌಡ ಬಳ್ಳೇರಿ, ಸ್ಕರಿಯಾ ಕಳಾರ, ಸೋಮಸುಂದರ ಕೂಜುಗೋಡು, ದಿನೇಶ್ ಮಾಸ್ಟರ್, ದುಗ್ಗಪ್ಪ ಅಗ್ರಹಾರ, ನಾರಾಯಣ ಆಗ್ರಹಾರ, ಶಿವರಾಮ ಸುಬ್ರಹ್ಮಣ್ಯ, ಬಾಬು ಇಚ್ಲಂಪಾಡಿ, ಎಲಿಯಾಸ್ ಮದನಿ ಕೋಡಿಂಬಾಳ, ಇ.ಜಿ.ಜೋಸೆಫ್, ಎಂ.ಪಿ.ಪುಷ್ಪರಾಜ್, ಪ್ರವೀಣ್ ಮುಂಡೋಡಿ ಭಾಗವಹಿಸಿದ್ದರು.
ಜಲೀಲ್ ಕಳಾರ ನಿರೂಪಿಸಿ ವಂದಿಸಿದರು. ಪ್ರತಿಭಟನೆಯ ಬಳಿಕ ಕಡಬ ತಾಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯ ವೇಳೆ ರಸ್ತೆಯಲ್ಲಿಯೇ ಒಲೆ ಉರಿಸಿ ಚಪಾತಿ ಬಿಸಿ ಮಾಡುವ ಮೂಲಕ ಅಡುಗೆ ಅನಿಲ ದರ ಏರಿಕೆಯನ್ನು ಖಂಡಿಸಲಾಯಿತು.
ಜೆಡಿಎಸ್‌ನಿಂದ 80 ಕೋಟಿ ರೂ. ಅನುದಾನ
ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ 10 ತಿಂಗಳ ಅವಧಿಯಲ್ಲಿ ಜೆಡಿಎಸ್ ಮುಖಂಡ ಸಯ್ಯದ್ ಮೀರಾ ಸಾಹೇಬ್ ಅವರ ಮನವಿಯಂತೆ ಕಡಬ ಪರಿಸರದಲ್ಲಿ ರಸ್ತೆ, ಸೇತುವೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗೆ 80 ಕೋಟಿ ರೂ.ಗಳಿಗೂ ಮಿಕ್ಕಿ ಅನು ದಾನ ನೀಡಿದ್ದಾರೆ. ಈಗ ಅದರ ಗುದ್ದಲಿಪೂಜೆ, ಉದ್ಘಾಟನೆ ಮಾಡುತ್ತಿರುವ ಬಿಜೆಪಿಯವರು ನಾವು ಅಭಿವೃದ್ಧಿ ಮಾಡಿದ್ದು ಎಂದು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಸಾಲ್ಯಾನ್ ಲೇವಡಿ ಮಾಡಿದರು.