ಚಿಕ್ಕಮಗಳೂರು: ನಗರದ ಗೃಹಮಂಡಳಿ ಬಡಾವಣೆಯ ಪವಿತ್ರವನ ಸಮೀಪ ನಗರಸಭೆ ಯಿಂದ ಸ್ಮಶಾನ ನಿರ್ಮಿಸುತ್ತಿರುವುದನ್ನು ವಿರೋಧಿಸಿ ಶ್ರೀಶೈಲ ಪುಷ್ಪಗಿರಿ ಮಠದ ಸೋಮ ಶೇಖರ ಸ್ವಾಮೀಜಿ ಪ್ರತಿಭಟನೆ ನಡೆಸಿದರು.
ಸ್ಮಶಾನ ಸಮೀಪ ಗುರುಸಿದ್ಧರಾಮೇಶ್ವರ ವಿದ್ಯಾಸಂಸ್ಥೆ ಇದ್ದು, ಅಲ್ಲೇ ವಿದ್ಯಾರ್ಥಿ ನಿಲಯ, ಸಮುದಾಯ ಭವನ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಸ್ಮಶಾನ ನಿರ್ಮಿಸಬಾರದು ಎಂದು ಸಂಸ್ಥೆಯ ಕಾರ್ಯದರ್ಶಿ ಎಸ್.ಎಸ್. ಚಂದ್ರಶೇಖರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿಸಿದರು.
ನಗರಸಭೆ ಮೂರು ಎಕರೆ ಜಾಗದಲ್ಲಿ ಹಿಂದೂ ಸ್ಮಶಾನ ನಿರ್ಮಿಸಲು ಮುಂದಾಗಿದೆ. ಕಂದಾಯ ಇಲಾಖೆ ಬೇರೆಡೆ ಜಾಗ ಗುರುತಿಸಿ ನೀಡಿದ್ದು, ಆ ಸ್ಥಳದಲ್ಲಿ ಸ್ಮಶಾನ ನಿರ್ಮಿಸದೆ ವಿದ್ಯಾಸಂಸ್ಥೆಯ ಪಕ್ಕದ ಜಾಗದಲ್ಲಿ ಸ್ಮಶಾನ ನಿರ್ಮಿಸಲಾಗುತ್ತಿದೆ. ಇದರಿಂದ ಶಾಲಾ ವಾತಾವರಣಕ್ಕೆ ತೊಂದರೆಯಾಗಲಿದೆ ಎಂದು ಆರೋಪಿಸಿದರು.
ಸ್ಮಶಾನಕ್ಕೆ ತೆರಳಲು ದಾರಿಯಿಲ್ಲ. ಈ ಜಾಗದಲ್ಲಿ ಪುಷ್ಪಗಿರಿ ಸಂಸ್ಥಾನದಿಂದ ಗೋಶಾಲೆ ನಡೆಸಲು 2021ರ ಜ.21ರಂದು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿತ್ತು. ಮಾ.31 ರಂದು ಕಂದಾಯ ಭೂಮಿ ಇಲ್ಲ ಎಂದು ತಿಳಿಸಲಾಗಿದೆ. ಸ್ಮಶಾನ ನಿರ್ಮಾಣಕ್ಕೆ ಜಾಗ ನೀಡಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ಸಂಸ್ಥೆಯ ಬೆಳವಣಿಗೆ, ಶಾಲಾ ವಾತಾವರಣದ ಹಿನ್ನೆಲೆಯಲ್ಲಿ ಜಾಗದಲ್ಲಿ ನಡೆಸುತ್ತಿರುವ ಸ್ಮಶಾನ ಕಾಮಗಾರಿ ತಡೆಹಿಡಿಯುವಂತೆ ನಗರಸಭೆಗೆ ಆದೇಶಿಸಬೇಕು. ಈ ಹಿಂದೆ ನೀಡಿದ ಜಾಗದಲ್ಲಿ ಸ್ಮಶಾನ ಕಾಮಗಾರಿ ಕೈಗೊಳ್ಳಬೇಕು. ತಮ್ಮ ಮನವಿಯಂತೆ ಗೋಶಾಲೆ ನಿರ್ಮಿಸಲು ಜಾಗ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.